ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

IPS ಅಧಿಕಾರಿ ಅಲೋಕ್ ಕುಮಾರ್‌ ವಿರುದ್ಧದ ಮಹಿಳೆ ಮೇಲಿನ ಹಲ್ಲೆ ಪ್ರಕರಣ ವಜಾಗೊಳಿಸಿದ ಹೈಕೋರ್ಟ್‌

06:27 PM Aug 08, 2024 IST | BC Suddi
Advertisement

ಬೆಂಗಳೂರು: ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ದಾಖಲಿಸಲಾಗಿದ್ದ ಮಹಿಳೆ ಮೇಲಿನ ಹಲ್ಲೆ (ಕ್ರಿಮಿನಲ್‌) ಪ್ರಕರಣದ ವಿಚಾರಣೆಯೊಂದನ್ನು ಹೈಕೋರ್ಟ್ ರದ್ದುಪಡಿಸಿದೆ. ಫಿರ್ಯಾದುದಾರರಾದ ಮಮತಾ ಸಿಂಗ್ (ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದ ಸಂತ್ರಸ್ತ ಬಾಲಕಿಯ ತಾಯಿ) ಸಲ್ಲಿಸಿದ್ದ ಖಾಸಗಿ ದೂರನ್ನು ಸಂಜ್ಞೇಯ ಅಪರಾಧ ಎಂದು ಪರಿಗಣಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ಅಲೋಕ್‌ ಕುಮಾರ್ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಅಲೋಕ್‌ ಕುಮಾರ್ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದ್ದು, ಅಲೋಕ್‌ ಕುಮಾರ್ ವಿರುದ್ಧ ನಗರದ 39ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆಯನ್ನು ವಜಾಗೊಳಿಸಿದೆ. ಅಲೋಕ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ಅವರು, ‘ವಿಚಾರಣಾ ನ್ಯಾಯಾಲಯವು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಇಲ್ಲದೇ ಪ್ರಾಸಿಕ್ಯೂಷನ್‌ಗೆ ಒಳಪಡಿಸುವ ದಿಸೆಯಲ್ಲಿ ಸಂಜ್ಞೇಯ ಅಪರಾಧ ಎಂದು ಪರಿಗಣಿಸಿದ್ದಾರೆ. ದಂಡ ಪ್ರಕ್ರಿಯಾ ಸಂಹಿತೆ–1973ರ ಕಲಂ 195ರ ಅಡಿ ಇಂತಹ ಕ್ರಮಕ್ಕೆ ಅವಕಾಶವಿಲ್ಲ. ಅಂತೆಯೇ, ಫಿರ್ಯಾದುದಾರರಾದ ಮಮತಾ ಸಿಂಗ್ ಈಗಾಗಲೇ ತೀರಿಕೊಂಡಿದ್ದಾರೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅಲೋಕ್‌ ಪ್ರಕರಣ ರದ್ದುಗೊಳಿಸಿ ಆದೇಶಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

Advertisement

Advertisement
Next Article