ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

68 ವರ್ಷಗಳ ಬಳಿಕ ಬೆಂಗಳೂರು ವಿಧಾನಸೌಧಕ್ಕೆ ಹೊಸ ಗೆಟಪ್..!

10:04 AM Jul 15, 2024 IST | Bcsuddi
Advertisement

ಕೆಂಗಲ್ ಹನುಮಂತಯ್ಯ ಅವರ ಕನಸಿನ ಅರಮನೆ, ರಾಜ್ಯಾಡಳಿತದ ಪ್ರಾಮುಖ್ಯ ಕಟ್ಟಡ ಇತಿಹಾಸ ಪ್ರಸಿದ್ಧ ವಿಧಾನಸೌಧ ಹೊಸ ಖದರ್ ನೊಂದಿಗೆ ಮೈದೆಳೆದು ನಿಂತಿದೆ. ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರ ದೂರದೃಷ್ಟಿ ಯೋಜನೆ ಮತ್ತು ಯೋಚನೆಯ ಫಲವಾಗಿ ಸಿದ್ದರಾಮಯ್ಯ ಸರಕಾರದ ಸಂಪೂರ್ಣ ಸಹಕಾರದೊಂದಿಗೆ 68 ವರ್ಷದ ಇತಿಹಾಸವಿರುವ ಕಟ್ಟಡ ಪುನಶ್ಚೇತನ ಕಂಡಿದೆ.

Advertisement

ವಿಧಾನ ಸೌಧ ಅಂತರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಸುಂದರ ವಾಸ್ತು ಶಿಲ್ಪ ಕಟ್ಟಡ. ಇಂತಹ ಮನೋಹರ ಆಡಳಿತ ಸೌಧ ಬೇರೆ ರಾಜ್ಯದಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ಹೊರಗಿನ ಸೌಂದರ್ಯಕ್ಕೆ ಕುಂದು ಬಾರದಂತೆ ಒಳಗಿನ ಸೌಂದರ್ಯವನ್ನೂ ಬಿಂಬಿಸಬೇಕು ಎಂದು ಕನಸು ಕಂಡವರು ಪ್ರಸ್ತುತ ಕಾರ್ಯಾಚರಿಸುತ್ತಿರುವ ಸ್ಪೀಕರ್ ಯು.ಟಿ.ಖಾದರ್. ಈ ಯೋಜನೆಗೆ ಸಾಥ್ ನೀಡಿದ್ದು ಸಿದ್ದರಾಮಯ್ಯ ಸರಕಾರ. ರಾಜ್ಯದ ಏಳೂವರೆ ಕೋಟಿ ಜನರ ಪೈಕಿ ಶಾಸಕರಾಗುವವರು 224 ಮಂದಿ. ಶಾಸಕರಾಗಿ ವಿಧಾನಸೌಧ ಪ್ರವೇಶಿಸುವುದೇ ಒಂದು ಭಾಗ್ಯ. ಅದರಲ್ಲೂ ಇಡೀ ವಿಧಾನಸೌಧಕ್ಕೆ ಸಭಾಧ್ಯಕ್ಷರಾಗುವುದು ಎಂದರೆ ಸಣ್ಣ ಮಾತಲ್ಲ. ಅದು ಯು.ಟಿ.ಖಾದರ್ ಗೆ ಕರುನಾಡು ನೀಡಿದ ದೊಡ್ಡ ಕೊಡುಗೆ ಮತ್ತು ಗೌರವ. ಈ ಗೌರವಕ್ಕೆ ಚ್ಯುತಿ ಬಾರದಂತೆ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಖಾದರ್ ಅಸೆಂಬ್ಲಿಗೆ ಹೊಸ ಖದರ್ ನೀಡುತ್ತಿದ್ದಾರೆ.

ವಿಧಾನಸೌಧ ಸುಂದರ ರೂಪದಲ್ಲಿದ್ದರೂ ಅದರೊಳಗೆ ಪ್ರವೇಶಿಸುವಾಗ ಕಬ್ಬಿಣದ ಗ್ರಿಲ್ ನ ಧೂಳು ಹಿಡಿದಿರುವ ಹಳೆಯ ಕಾರಿಡಾರ್, ಬಾಗಿಲುಗಳು ಕಟ್ಟಡದ ಪ್ರಸಿದ್ಧಿಗೆ ಕಪ್ಪು ಚುಕ್ಕೆಯಾಗಿ ಕಾಣುತ್ತಿತ್ತು. ಮಣ್ಣು, ಧೂಳಿನ ಕಳೆಯಿರುವ ನೆಲ ಎದುರುಗೊಳ್ಳುತ್ತಿತ್ತು. ಹೊರದೇಶದ ವಿಐಪಿ ಗಳು, ಸೆಲೆಬ್ರಿಟಿಗಳು ವಿಧಾನಸೌಧಕ್ಕೆ ಭೇಟಿ ನೀಡುವಾಗ ಅವರನ್ನು ಹಳೆಯ ಗ್ರಿಲ್ ಕಿಟಕಿ, ಬಾಗಿಲುಗಳೇ ಸ್ವಾಗತಿಸುತ್ತಿತ್ತು. ಇದಕ್ಕೆ ಬದಲಾವಣೆ ತಂದ ಸ್ಪೀಕರ್ ಯು.ಟಿ.ಖಾದರ್ ಸಿದ್ದರಾಮಯ್ಯ ಸರಕಾರದ ಸಹಭಾಗಿತ್ವದಲ್ಲಿ ಹೊಸ ರೂಪ ನೀಡಿದ್ದಾರೆ. ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದಿಂದ ಬೀಟೆಮರ ಮತ್ತು ತೇಗದಮರ ಪಡೆದು ಸ್ವಾಗತ ದ್ವಾರಗಳಿಗೆ ಹೊಸ ಗೆಟಪ್ ನೀಡಿದ್ದಾರೆ. ಪ್ರಸ್ತುತ ವಿಐಪಿಗಳು, ಮಂತ್ರಿ ಮಹೋದಯರು ಸಾಗುವ ಪೂರ್ವ ಮತ್ತು ಪಶ್ಚಿಮದ ಮುಖ್ಯದ್ವಾರಗಳು ಸಾಂಪ್ರದಾಯಿಕ ಶೈಲಿಯ ಮರದ ಕೆತ್ತನೆಯಿಂದ ನಳನಳಿಸುತ್ತಿದೆ. ನೆಲಕ್ಕೆ ಹಸಿರು ಮಕಮಲ್ಲು, ಮಹಡಿ ಏರುವ ಸ್ಟೆಪ್ ಗಳಿಗೆ ಕೆಂಪು ಕಾರ್ಪೆಟ್ ಹಾಸಲಾಗಿದೆ. ಕಲಾಪ ನಡೆಯುವಲ್ಲಿ ಮತ್ತು ಅವಶ್ಯಕ ಸ್ಥಳಗಳ ಗೋಡೆಗಳಿಗೆ ರಾಜ್ಯ ಸರಕಾರದ ಲಾಂಛನ "ಗಂಡಬೇರುಂಡ" ಆಕೃತಿಯ ಗಡಿಯಾರ ಅಳವಡಿಸಲಾಗಿದೆ. ಒಟ್ಟಿನಲ್ಲಿ ವಿಧಾನಸೌಧದ ಒಳಾಂಗಣ ಹೊಸ ಖದರ್ ನೊಂದಿಗೆ ಕಂಗೊಳಿಸುತ್ತಿದೆ. ಇನ್ನು ಸೌಧಕ್ಕೆ ನೂರು ವರ್ಷ ಕಳೆದರೂ ಈಗಿನ ಪುನಶ್ಚೇತನ ಇತಿಹಾಸದ ಪುಟ ಸೇರಲಿದೆ. ಇದು ಕೇವಲ ಆರಂಭವಷ್ಟೆ. ಮುಂದಿನ ದಿನಗಳಲ್ಲಿ ಇಡೀ ವಿಧಾನಸೌಧದ ಒಳಾಂಗಣವನ್ನು ಹಳೆಯ ರೂಪ ನೀಡಿ ನಾವೀನ್ಯ ಶೈಲಿಯಲ್ಲಿ ಬದಲಿಸುವ ಕನಸನ್ನು ಸ್ಪೀಕರ್ ಖಾದರ್ ಹೊಂದಿದ್ದಾರೆ.

2024 ಜುಲೈ 15 ಸೋಮವಾರ ವಿಧಾನಸಭೆಯ ಕಲಾಪ ಆರಂಭವಾಗುವ ಮುಂಚಿತವಾಗಿ ಸ್ಪೀಕರ್ ಯು.ಟಿ. ಖಾದರ್ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಮತ್ತು ವಿಧಾನಸಭಾ ವಿಶೇಷ ಬೋರ್ಡ್ ಮೆಂಬರ್ ಎಚ್.ಕೆ. ಪಾಟೀಲ್, ಗೃಹ ಸಚಿವ ಜಿ. ಪರಮೇಶ್ವರ್, ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ.

ಯು.ಟಿ.ಖಾದರ್ ಅವರು ಸಿದ್ದರಾಮಯ್ಯ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾಗ ಅವರ ಕಾರ್ಯದಕ್ಷತೆ ಗುರುತಿಸಿ ಕೇಂದ್ರ ಸರಕಾರ ರಾಷ್ಟ್ರಪ್ರಶಸ್ತಿ ನೀಡಿತ್ತು. ಆಹಾರ ಸಚಿವರಾಗಿದ್ದಾಗ ಪಡಿತರ ಚೀಟಿಯಲ್ಲಿ ತಂದ ಅಮೂಲಾಗ್ರ ಬದಲಾವಣೆಗಾಗಿ "ಖಾದರ್ ಕಾರ್ಡ್" ಎಂಬ ಪ್ರಸಿದ್ಧಿಗೆ ಪಾತ್ರರಾಗಿದ್ದರು. ಪ್ರಸತ್ತು ಸ್ಪೀಕರ್ ಆಗಿ ಈ ಹಿಂದೆ ಯಾರೂ ಮಾಡದ ಬದಲಾವಣೆಯನ್ನು ವಿಧಾನಸೌಧದಲ್ಲಿ ಕಾರ್ಯಗತಗೊಳಿಸುವ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚೊತ್ತಿದ್ದಾರೆ.

Advertisement
Next Article