60 ಲಕ್ಷ ರೂ ಲಂಚಕ್ಕಾಗಿ 18 ಗಂಟೆ ಉದ್ಯಮಿಯನ್ನು ಕೂಡಿ ಹಾಕಿದ್ದ CGST ಅಧೀಕ್ಷಕ ಸೇರಿ ಮೂವರ ಬಂಧನ
ಮುಂಬೈ ಮೂಲದ ಉದ್ಯಮಿಯೊಬ್ಬರನ್ನು 18 ಗಂಟೆಗಳ ಕಾಲ ಕೂಡಿ ಹಾಕಿ 60 ಲಕ್ಷ ರೂಪಾಯಿಗೂ ಅಧಿಕ ಲಂಚಕ್ಕೆ ಒತ್ತಾಯಿಸಿದ್ದ ಪ್ರಕರಣದ ಸಂಬಂಧ ಮುಂಬೈನ ಸರಕು ಮತ್ತು ಸೇವಾ ತೆರಿಗೆ ಇಲಾಖೆ (CGST) ಅಧೀಕ್ಷಕ (ಸೋರಿಕೆ ತಡೆ ವಿಭಾಗ) ಸೇರಿದಂತೆ ಮೂವರು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. CGST ಅಧೀಕ್ಷಕ ಸಚಿನ್ ಗೋಕುಲ್ಕಾ, ಚಾರ್ಟರ್ಡ್ ಅಕೌಂಟೆಂಟ್ ರಾಜ್ ಅಗರ್ವಾಲ್ ಮತ್ತು ಅಭಿಷೇಕ್ ಮೆಹ್ತಾ ಬಂಧಿತರು ಎಂದು ಗುರುತಿಸಲಾಗಿದೆ. ಆರೋಪಿಗಳು 60 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, 20 ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ. ಉದ್ಯಮಿಯೊಬ್ಬರು ನೀಡಿದ್ದ ದೂರಿನ ಅನ್ವಯ ಮುಂಬೈ CGSTಯ 6 ಅಧಿಕಾರಿಗಳು ಸೇರಿದಂತೆ 8 ಜನರ ವಿರುದ್ಧ ಲಂಚದ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿದೆ. ಸಾಂತಾಕ್ರೂಜ್‌ನ CGST ಕಚೇರಿಗೆ ಸೆಪ್ಟೆಂಬರ್ 4ರಂದು ಸಂಜೆ ಉದ್ಯಮಿ ಭೇಟಿ ನೀಡಿದಾಗ ಅವರನ್ನು ಇಡೀ ರಾತ್ರಿ ಕಚೇರಿಯಲ್ಲಿಯೇ ಕೂಡಿಹಾಕಲಾಗಿತ್ತು. ಸುಮಾರು 18 ಗಂಟೆಗಳ ನಂತರ ಸೆಪ್ಟೆಂಬರ್ 5 ರಂದು ಬಿಡುಗಡೆ ಮಾಡಲಾಗಿತ್ತು. ಕಚೇರಿಯಲ್ಲಿ ಕೂಡಿಹಾಕಿದ್ದ ವೇಳೆಯಲ್ಲಿ ಆರೋಪಿಗಳಲ್ಲಿ ಒಬ್ಬರಾದ CGST ಅಧೀಕ್ಷಕರು ದೂರುದಾರರನ್ನು ಬಂಧಿಸದೇ ಇರಲು 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ನಂತರ ಅದನ್ನು 60 ಲಕ್ಷ ರೂಪಾಯಿಗೆ ಇಳಿಕೆ ಮಾಡಿದ್ದರು. ಅಧೀಕ್ಷಕರ ಇತರ ಮೂವರು ಸಹೋದ್ಯೋಗಿಗಳು ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ದೂರುದಾರರ ಮೇಲೆ ಒತ್ತಡ ಹೇರಿದ್ದರು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.