For the best experience, open
https://m.bcsuddi.com
on your mobile browser.
Advertisement

'28ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮುತ್ತಿಗೆ'- ಬಿ.ವೈ.ವಿಜಯೇಂದ್ರ

01:48 PM Jun 26, 2024 IST | Bcsuddi
 28ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮುತ್ತಿಗೆ   ಬಿ ವೈ ವಿಜಯೇಂದ್ರ
Advertisement

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ ಸಂಬಂಧ ಹಣಕಾಸು ಸಚಿವರಾದ ಮುಖ್ಯಮಂತ್ರಿಯವರು ಜವಾಬ್ದಾರಿ ಹೊರಬೇಕು. ಈ ಸಂಬಂಧ ಶರಣಪ್ರಕಾಶ್ ಪಾಟೀಲ್, ನಿಗಮದ ಅಧ್ಯಕ್ಷರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದರು.

ದೆಹಲಿಯಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 28ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ಪೋಲಾಗಿದೆ; ಅದರ ದುರ್ಬಳಕೆ ಆಗಿದೆ. ಕಾಂಗ್ರೆಸ್ ಸರಕಾರವು ಈ ಹಣವನ್ನು ದೋಚಿದೆ ಎಂದು ಟೀಕಿಸಿದರು.

ಕರ್ನಾಟಕ ರಾಜ್ಯ ಸರಕಾರವು ಜನರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಆಕ್ಷೇಪಿಸಿದ ಅವರು, ನಿಗಮದ ಹಗರಣ ಸಂಬಂಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ಪತ್ರದನ್ವಯ ಸಿಬಿಐ ತನಿಖೆ ನಡೆಯುತ್ತಿದೆ. ರಾಜ್ಯ ಸರಕಾರ ಆತುರಾತುರವಾಗಿ ಎಸ್‍ಐಟಿಯನ್ನೂ ರಚಿಸಿ ತಮಗೆ ಬೇಕಾದಂತೆ ತನಿಖೆ ನಡೆಸುತ್ತಿದೆ ಎಂದು ಟೀಕಿಸಿದರು.

Advertisement

ಎಸ್‍ಐಟಿ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ. ಅಲ್ಲಿ ಇಲ್ಲಿ ಅಧಿಕಾರಿ ಮನೆಯಲ್ಲಿ ಒಂದಷ್ಟು ಹಣ ಲಭಿಸಿದೆ ಎನ್ನುವ ಮೂಲಕ ಕಣ್ಣೊರೆಸುವ ತಂತ್ರವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ದೂರಿದರು. ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ. ತೆಲಂಗಾಣಕ್ಕೆ ಬೇನಾಮಿ ಖಾತೆಗೆ ಹಣ ವರ್ಗಾವಣೆ ಮಾಡಿ ವಿತ್‍ಡ್ರಾ ಮಾಡಿದ್ದಾರೆ. ಈ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ ಎಂದು ಆರೋಪಿಸಿದರು.

ಹಿಂದೆಯೂ ಕಾಂಗ್ರೆಸ್ ಸರಕಾರ ಇದ್ದಾಗ ಇಂಥ ಅನೇಕ ಹಗರಣಗಳನ್ನು ಅವರದೇ ಎಸಿಬಿ ಮೂಲಕ ಮುಚ್ಚಿ ಹಾಕಿದ್ದರು ಎಂದು ಆರೋಪಿಸಿದರು. ಹೋರಾಟವನ್ನು ಇಲ್ಲಿಗೇ ಕೈಬಿಡುವುದಿಲ್ಲ ಎಂದ ಅವರು, ಪೆಟ್ರೋಲ್- ಡೀಸೆಲ್ ದರ ಏರಿಸಿದ್ದಾರೆ. ಹಾಲಿನ ದರ ಹೆಚ್ಚಿಸಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಏರಿಸಿದ್ದರಿಂದ ರಾಜ್ಯದೆಲ್ಲೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ವಿವರಿಸಿದರು.

ಬೆಲೆ ಏರಿಕೆಯ ಪರ್ವ:

ರಾಜ್ಯದಲ್ಲಿ ಬೆಲೆ ಏರಿಕೆಯ ಪರ್ವ ನಡೆಯುತ್ತಿದೆ. ಜನರಿಗೆ ಬರೆ ಎಳೆಯುವ ಕೆಲಸವನ್ನು ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಲಾಗಿದೆ. ವಿದ್ಯುತ್ ದರ ಏರಿಸಿದ್ದಾರೆ. ರೈತರು ತಮ್ಮ ಹೊಲಕ್ಕೆ ಟ್ರಾನ್ಸ್‍ಫಾರ್ಮರ್ ಹಾಕಿಸಲು 25 ಸಾವಿರ ಇದ್ದುದನ್ನು 2.5 ಲಕ್ಷಕ್ಕೆ ಏರಿಸಿದ್ದಾರೆ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು

Author Image

Advertisement