10 ವರ್ಷಕ್ಕೂ ಹೆಚ್ಚು ಕಾಲ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದವರು ಕಾಯಂ ಸೇವೆಗೆ ಅರ್ಹರು.! ಹೈಕೋರ್ಟ್ ಮಹತ್ವದ ಆದೇಶ.!
ಬೆಂಗಳೂರು: ರೇಷ್ಮೆ, ತೋಟಗಾರಿಕೆ ಇಲಾಖೆಯಲ್ಲಿ ಮಂಜೂರಾಗದ ಹುದ್ದೆಗಳಿಗೆ 10 ವರ್ಷಕ್ಕೂ ಹೆಚ್ಚು ಕಾಲದಿಂದ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದವರು ಕಾಯಂ ಸೇವೆಗೆ ಅರ್ಹರು ಎಂದು ಹೈಕೋರ್ಟ್ ಆದೇಶಿಸಿದೆ.
ಅರ್ಜಿದಾರರನ್ನು ಮೂರು ತಿಂಗಳಲ್ಲಿ ಸೂಕ್ತ ಹುದ್ದೆಗಳಿಗೆ ನೇಮಕ ಮಾಡಿ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಡಕೋಳದ ಶಾಂತಲಕ್ಷ್ಮಿ ಮತ್ತು 30ಕ್ಕೂ ಅಧಿಕ ಮಂದಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ.
ಅರ್ಜಿಗಳನ್ನು ಮಾನ್ಯ ಮಾಡಿದ ಹೈಕೋರ್ಟ್, ಇಲಾಖೆಗಳು ಅರ್ಜಿದಾರರ ಸೇವೆ ಕಾಯಂಗೆ ಅರ್ಹರಲ್ಲ ಎಂದು 2010ರ ಜೂನ್ 14 ಮತ್ತು 2012 ರ ಜೂನ್ 15 ರಂದು ನೀಡಿದ್ದ ಹಿಂಬರಹಗಳನ್ನು ರದ್ದು ಮಾಡಿದೆ. 2002/2005ರ ನಿಯಮಗಳಂತೆ ಕಾಯಂ ಸೇವೆಗೆ ಅರ್ಹರು ಎಂದು ಹೈಕೋರ್ಟ್ ಘೋಷಿಸಿದೆ.
ಈ ಪ್ರಕರಣದಲ್ಲಿ 2002/ 2005ರ ಯೋಜನೆಗಳಂತೆ ಅರ್ಜಿದಾರರು ಸೇವೆ ಕಾಯಂಗೆ ಅರ್ಹರಾಗಿದ್ದಾರೆ. ಅವರ ಸೇವೆ ಕಾಯಂಗೊಂಡಿದ್ದು, ಅವರ ಕೆಲಸದ ಸ್ವರೂಪ ಮತ್ತು ಸೇವೆ ಮುಂದುವರಿಕೆ ಬಗ್ಗೆ ನಿರ್ಧರಿಸಬೇಕಿದೆ. ಅರ್ಜಿದಾರರನ್ನು ಇತರೆ ಸಿಬ್ಬಂದಿಯಂತೆ ಸಮಾನವಾಗಿ ಕಾಣಬೇಕಿದೆ ಎಂದು ಆದೇಶ ನೀಡಲಾಗಿದೆ.