ಹಾಸನ: 20 ದಿನಗಳ ಬಳಿಕ ತವರು ಜಿಲ್ಲೆಗೆ ಆಗಮಿಸುತ್ತಿರುವ ಎಚ್.ಡಿ ರೇವಣ್ಣ
ಹಾಸನ: ಅತ್ಯಾಚಾರ ಸಂತ್ರಸ್ತ ಮಹಿಳೆಯ ಕಿಡ್ನಾಪ್, ಮನೆ ಕೆಲಸದ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಜಾಮೀನು ಪಡೆದು ನಿರಾಳರಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಇಂದು 20 ದಿನಗಳ ನಂತರ ತವರಿಗೆ ಆಗಮಿಸುತ್ತಿದ್ದಾರೆ. ಇಂದು ತಮ್ಮ ಕುಟುಂಬದ ಆರಾಧ್ಯದೈವ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ, ಕುಲದೈವ ಹರದನಹಳ್ಳಿಯ ದೇವೇಶ್ವರ, ಹೊಳೆನರಸೀಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳಿಗೆ ರೇವಣ್ಣ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಿಂದ ಹೊರಡುತ್ತಿದ್ದಾರೆ. ಜೈಲಿನಿಂದ ಹೊರಬಂದ ದಿನವೇ ತವರೂರಿಗೆ ಹೊರಟಿದ್ದ ರೇವಣ್ಣ ಅವರನ್ನು ಹೊಳೆನರಸೀಪುರಕ್ಕೆ ಹೋಗುವುದು ಬೇಡ ಎಂದು ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ತಡೆದಿದ್ದರು. ಇಂದು ಮನೆದೇವರಿಗೆ ಪೂಜೆ ಸಲ್ಲಿಸಲು ದೇವೇಗೌಡರಿಂದ ಅನುಮತಿ ಪಡೆದಿರುವ ಪುತ್ರ ಎಚ್.ಡಿ.ರೇವಣ್ಣ ಅವರಿಗೆ ಎಲ್ಲಿಯೂ ಕೂಡ ಏನನ್ನೂ ಮಾತನಾಡದಂತೆ ಅವರುಸೂಚನೆ ನೀಡಿದ್ದಾರೆ. ಹಾಸನ ಜಿಲ್ಲೆಯ ಗಡಿಭಾಗ ಕಿರಿಸಾವೆಯಲ್ಲಿ ಎಚ್.ಡಿ.ರೇವಣ್ಣಗೆ ಸ್ವಾಗತ ಕೋರಲು ಜೆಡಿಎಸ್ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಆದರೆ ಯಾರೂ ಹಾರ-ತುರಾಯಿ ಹಾಕುವುದಾಗಲೀ, ಪಟಾಕಿ ಸಿಡಿಸುವುದು ಬೇಡ ಎಂದು ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಎಚ್.ಡಿ.ರೇವಣ್ಣ ಮನವಿ ಮಾಡಿದ್ದಾರೆ.