ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹರಿಯಾಣದಲ್ಲಿ ಹ್ಯಾಟ್ರಿಕ್ ಗೆಲವು - ಬಿಜೆಪಿಯಲ್ಲಿ ಸಂಭ್ರಮದ ಆಚರಣೆ

05:12 PM Oct 08, 2024 IST | BC Suddi
Advertisement

ಬೆಂಗಳೂರು : ಹರಿಯಾಣ ರಾಜ್ಯದಲ್ಲಿ ಬಿಜೆಪಿ ಸರಕಾರ ಸತತವಾಗಿ 3ನೇ ಬಾರಿಗೆ ಅಧಿಕಾರ ಪಡೆಯುತ್ತಿದೆ. ಅಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸಂತಸ ವ್ಯಕ್ತಪಡಿಸಿದರು.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಧ್ಯಾಹ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಬಹಳಷ್ಟು ಪಿತೂರಿ ನಡೆಸಿತು. ಕಾಂಗ್ರೆಸ್ ಪಕ್ಷ ಏನೇ ತಿಪ್ಪರಲಾಗ ಹಾಕಿದರೂ ಸಹ ಕಾಂಗ್ರೆಸ್ ಗ್ಯಾರಂಟಿಗಿಂತ ನರೇಂದ್ರ ಮೋದಿಜೀ ಅವರ ಅಭಿವೃದ್ಧಿಯ ಗ್ಯಾರಂಟಿ ಬಗ್ಗೆ ಹರಿಯಾಣದ ಜನರು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ನಮ್ಮೆಲ್ಲರಿಗೆ ಸಂತೋಷವನ್ನು ತಂದು ಕೊಟ್ಟಿದೆ. ಪ್ರಜ್ಞಾವಂತ ಜನರು ಮೋದಿಜೀ ಅವರ ನಾಯಕತ್ವಕ್ಕೆ ಇನ್ನಷ್ಟು ಹೆಚ್ಚು ಪುಷ್ಟಿ ಕೊಟ್ಟಿದ್ದಾರೆ. ಜಮ್ಮು ಕಾಶ್ಮೀರದಲ್ಲೂ ಬಿಜೆಪಿ ದೊಡ್ಡ ಸಾಧನೆ ಮಾಡಿದೆ. ಹರಿಯಾಣದ ಫಲಿತಾಂಶವು ಮುಂಬರುವ ಮಹಾರಾಷ್ಟ್ರ ರಾಜ್ಯದ ಚುನಾವಣೆಯಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಅಲ್ಲಿ ಕೂಡ ಬಿಜೆಪಿ ಮೈತ್ರಿಕೂಟವು ಜಯಭೇರಿ ಬಾರಿಸಲಿದೆ ಎಂದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬರಲು ಗ್ಯಾರಂಟಿಗಳನ್ನು ಬಳಸಿ, ಇದೀಗ ಗ್ಯಾರಂಟಿಗಳನ್ನು ಕಸದ ಬುಟ್ಟಿಗೆ ಹಾಕಿದ್ದು ಸೇರಿದಂತೆ ಅನೇಕ ವಿಚಾರಗಳು ಹರಿಯಾಣ ಚುನಾವಣೆಯಲ್ಲಿ ಪ್ರಸ್ತಾಪಕ್ಕೆ ಬಂದಿವೆ. ಅಹಿಂದ ಹೆಸರು ಹೇಳಿಕೊಂಡು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರಕಾರವು ಇವತ್ತು ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ಮೂಲಕ ಆ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಈ ವಿಚಾರವನ್ನೂ ಬಿಜೆಪಿ ಅಲ್ಲಿ ಪ್ರಚಾರ ಮಾಡಿತ್ತು. ಕಾಂಗ್ರೆಸ್ಸಿನ ಡೋಂಗಿ ರಾಜಕಾರಣ, ಕಾಂಗ್ರೆಸ್ಸಿನವರು ಹೇಳುವುದೊಂದು, ಮಾಡುವುದೊಂದು- ಇವೆಲ್ಲವೂ ಅಲ್ಲಿನ ಚುನಾವಣೆ ವೇಳೆ ಚರ್ಚೆ ಆಗಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಬೊಮ್ಮಾಯಿಯವರ ಶಿಫಾರಸನ್ನು ಯಥಾವತ್ ಜಾರಿಗೊಳಿಸಲು ಒತ್ತಾಯ:
ಇವತ್ತು ರಾಜ್ಯದ ಎಲ್ಲ ಪ್ರಮುಖರ ಜೊತೆ ಸಮಾಲೋಚನಾ ಸಭೆ ಕರೆದಿದ್ದೆವು. ಹಿಂದೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದಾಗ ಮೀಸಲಾತಿ ಬಗ್ಗೆ ನಿರ್ಣಯ ಕೈಗೊಂಡಿದ್ದರು. ವರ್ಗೀಕರಣ ಮಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದ್ದರು. ಇವುಗಳ ಕುರಿತು ಚರ್ಚಿಸಿ ಒಳ ಮೀಸಲಾತಿ ವಿಚಾರವಾಗಿ ಸರ್ವರೊಂದಿಗೆ ಚರ್ಚೆ ಮಾಡಿದ್ದು, ಹಿಂದಿನ ಬೊಮ್ಮಾಯಿ ಸರಕಾರ ಕೇಂದ್ರಕ್ಕೆ ಮಾಡಿದ ಶಿಫಾರಸನ್ನು ರಾಜ್ಯದ ಕಾಂಗ್ರೆಸ್ ಸರಕಾರ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಸದ್ಯವೇ ಬಿಜೆಪಿ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬೊಮ್ಮಾಯಿ ಸರಕಾರದ ಶಿಫಾರಸನ್ನು ಯಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸಲಿದೆ ಎಂದು ತಿಳಿಸಿದರು.

 

 

Advertisement
Next Article