ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಹಗರಣದಲ್ಲಿ ಸಿಎಂ ಭಾಗಿ, ಸಚಿವರ ಜೊತೆ ಮುಖ್ಯಮಂತ್ರಿ ರಾಜೀನಾಮೆ ನೀಡಲಿ'-ಆರ್.ಅಶೋಕ

06:01 PM Jun 06, 2024 IST | Bcsuddi
Advertisement

ಬೆಂಗಳೂರು:ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಸಚಿವ ಬಿ.ನಾಗೇಂದ್ರ ಜೊತೆ ಮುಖ್ಯಮಂತ್ರಿ ಕೂಡ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಆಗ್ರಹಿಸಿದರು.

Advertisement

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ಅವರ ತಕ್ಷಣದ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ ನಾಯಕರು, ವಿಧಾನಸೌಧದಿಂದ ರಾಜಭವನವರೆಗೆ ತೆರಳಿ, ರಾಜ್ಯಪಾಲರಿಗೆ ದೂರು ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ, ಸಚಿವ ಬಿ.ನಾಗೇಂದ್ರ ಅವರು ಈ ಪ್ರಕರಣದಲ್ಲಿ ಸಣ್ಣ ಆರೋಪಿ. ಇದಕ್ಕೂ ದೊಡ್ಡ ಆರೋಪಿಗಳು ಇದರ ಹಿಂದೆ ಇದ್ದಾರೆ. ಈ ಎಲ್ಲ ಸತ್ಯ ಹೊರಬರಲು ಪ್ರಕರಣವನ್ನು ಸಿಬಿಐಗೆ ನೀಡಬೇಕು. ಸಿಎಂ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ನೀಡಬೇಕು. ಅಕ್ರಮದ ಹಣವನ್ನು ಸಚಿವರೊಬ್ಬರೇ ನುಂಗಿಲ್ಲ. ಇದರಲ್ಲಿ ಇಡೀ ಸಚಿವ ಸಂಪುಟ ಶಾಮೀಲಾಗಿದ್ದು, ಹಣ ಹೈದರಾಬಾದ್‍ಗೆ ಹೋಗಿ ನಂತರ ದೆಹಲಿಗೆ ತಲುಪಿದೆ. ನನ್ನ ಬುಡಕ್ಕೆ ಬಂದುಬಿಡುತ್ತದೆ ಎಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಸಿಬಿಐ ತನಿಖೆ ಮಾಡಿಸಲು ಒಪ್ಪುತ್ತಿಲ್ಲ. ರಾಹುಲ್ ಗಾಂಧಿ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಬಡವರಿಗೆ ಸೇರಬೇಕಾಗಿದ್ದ ಹಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೇಬಿಗೆ ಹೋಗಿದೆ. ಪರಿಶಿಷ್ಟ ಜಾತಿ, ಪಂಗಡದ ಹಣವನ್ನೂ ನುಂಗುತ್ತಾರೆ ಎನ್ನುವುದು ರಾಜ್ಯ ರಾಜಕೀಯದ ದುರಂತ. 14 ಬಾರಿ ಬಜೆಟ್ ಮಂಡಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಈಗ ಅವರ ಕಣ್ಣಿನಡಿಯಲ್ಲೇ ಹಗರಣ ನಡೆದಿದೆ. ಒಂದು ವರ್ಷ ಕಾಂಗ್ರೆಸ್ ಸರ್ಕಾರ ಲೂಟಿ ಗ್ಯಾರಂಟಿಯನ್ನು ನೀಡಿದೆ ಎಂದು ದೂರಿದರು.

ಲೂಟಿಕೋರರ ಪಾರ್ಟಿ ಕಾಂಗ್ರೆಸ್ ನುಡಿದಂತೆ ನಡೆಯುತ್ತೇವೆ ಎಂದು ಹಣ ಕೊಳ್ಳೆ ಹೊಡೆದಿದ್ದಾರೆ. ಯಾವುದೇ ಪ್ರಕರಣದಲ್ಲಿ ಒಂದೇ ಬಾರಿಗೆ ಎರಡು ಸಂಸ್ಥೆಯಿಂದ ತನಿಖೆ ನಡೆಸಲು ಸಾಧ್ಯವಿಲ್ಲ. ಆದರೆ ಸಿಬಿಐ ಮಾಡಬೇಕಾದ ತನಿಖೆಯನ್ನು ಎಸ್‍ಐಟಿಗೆ ವಹಿಸಲಾಗಿದೆ. ಈ ಎಟಿಎಂ ಸರ್ಕಾರ ಟಕಾಟಕ್ ಎಂದು ಹಣ ವರ್ಗಾವಣೆ ಮಾಡಿಕೊಂಡಿದೆ. ಇನ್ನೂ ಯಾವ ನಿಗಮಗಳಲ್ಲಿ ಎಷ್ಟು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ? ಎಷ್ಟು ಬೇನಾಮಿ ಖಾತೆಗಳಿಗೆ ಹಣ ಹೋಗಿದೆ ಎಂದು ಪತ್ತೆಯಾಗಬೇಕು. ಸಚಿವರ ಆಪ್ತ ಸಹಾಯಕ ಇದರಲ್ಲಿ ಶಾಮೀಲಾಗಿದ್ದಾನೆ ಎಂದರೆ ಸಚಿವರು ಕೂಡ ಶಾಮೀಲಾಗಿದ್ದಾರೆ ಎಂದರು.

 

Advertisement
Next Article