For the best experience, open
https://m.bcsuddi.com
on your mobile browser.
Advertisement

'ಸಿಬಿಐ ತನಿಖೆಗೆ ಆದೇಶಿಸಿ ನಿರ್ಗಮಿಸಿದರೆ ಸಿಎಂ ಗೌರವ ಹೆಚ್ಚಳ -ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಿ': ವಿಜಯೇಂದ್ರ

05:45 PM Sep 25, 2024 IST | BC Suddi
 ಸಿಬಿಐ ತನಿಖೆಗೆ ಆದೇಶಿಸಿ ನಿರ್ಗಮಿಸಿದರೆ ಸಿಎಂ ಗೌರವ ಹೆಚ್ಚಳ  ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಿ   ವಿಜಯೇಂದ್ರ
Advertisement

ಬೆಂಗಳೂರು : ಸಿದ್ದರಾಮಯ್ಯನವರು ಹೈಕೋರ್ಟ್ ತೀರ್ಪು ಮತ್ತು ಇವತ್ತಿನ ವಿಶೇಷ ನ್ಯಾಯಾಲಯದ ಆದೇಶವನ್ನು ಒಪ್ಪಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸರಿಯಾದ ರೀತಿ ತನಿಖೆಗೆ ಸಹಕಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಒತ್ತಾಯವನ್ನು ಮುಂದಿಟ್ಟರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಮೇಲೆ ಆರೋಪಗಳು ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಆಗ, ‘ಅಧಿಕಾರದಲ್ಲಿ ಇರುವ ಕಾರಣ ತನಿಖೆ ಮೇಲೆ ಪ್ರಭಾವ ಆಗ್ತದೆ; ಪ್ರಭಾವ ಬೀರುವ ಸಾಧ್ಯತೆಗಳಿವೆ. ಈ ಸಾಧ್ಯತೆಗಳಿರುವ ಕಾರಣ ನ್ಯಾಯಯುತ ಮತ್ತು ನಿಷ್ಪಕ್ಷಪಾತ (ಫೇರ್ ಆಂಡ್ ಇಂಪಾರ್ಶಿಯಲ್) ತನಿಖೆ ಅಸಾಧ್ಯ. ಅದಕ್ಕೋಸ್ಕರ ಮಿಸ್ಟರ್ ಯಡಿಯೂರಪ್ಪ ಅಧಿಕಾರದಲ್ಲಿ ಇರಬಾರದು. ಹಿ ಶುಡ್ ರಿಸೈನ್ ಇಮ್ಮೀಡಿಯೆಟ್ಲಿ’ ಎಂದಿದ್ದರು ಎಂದು ತಿಳಿಸಿದರು.

ಸಿದ್ದರಾಮಯ್ಯನವರ ಈ ವಿಡಿಯೋ ತುಣುಕನ್ನು ಟಿ.ವಿ. ಮೂಲಕ ಪ್ರದರ್ಶನ ಮಾಡಲಾಯಿತು.
ಬಿಜೆಪಿ, ಭ್ರಷ್ಟ ಕಾಂಗ್ರೆಸ್ ಮತ್ತು ಭ್ರಷ್ಟ ಮುಖ್ಯಮಂತ್ರಿ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದೆ. ಬೆಂಗಳೂರಿನಿಂದ ಮೈಸೂರಿಗೆ ‘ಮೈಸೂರು ಚಲೋ’ ಪಾದಯಾತ್ರೆ ನಡೆಸಿದ್ದೆವು. ಖಾಸಗಿ ದೂರಿನ ಆಧಾರದ ಮೇಲೆ ರಾಜ್ಯಪಾಲರು ಇವತ್ತು ತನಿಖೆಗೆ ಅನುಮತಿ ನೀಡಿ, ರಾಜ್ಯಪಾಲರ ಆದೇಶವನ್ನು ರಾಜ್ಯ ಹೈಕೋರ್ಟ್ ‘ರಾಜ್ಯಪಾಲರು ನೀಡಿದ ಆದೇಶ ಕ್ರಮಬದ್ಧವಾಗಿದೆ’ ಎಂದು ಹೇಳಿದೆ.

Advertisement

ಇದೀಗ ವಿಶೇಷ ನ್ಯಾಯಾಲಯವು ಮುಡಾ ಹಗರಣದ ತನಿಖೆಗೆ ಸೂಚಿಸಿದೆ. ಗೌರವಾನ್ವಿತ ಸಿಎಂ ಸಿದ್ದರಾಮಯ್ಯನವರು ಹಿಂದೆ ವಿಪಕ್ಷ ನಾಯಕರಾಗಿದ್ದಾಗ ಹೇಳಿದ ಮಾತನ್ನು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಮೈಸೂರಿನ ಲೋಕಾಯುಕ್ತ ಪೊಲೀಸರಿಂದ ತನಿಖೆ ಸಾಧ್ಯವೇ?
ಮೈಸೂರಿನ ಲೋಕಾಯುಕ್ತ ಪೊಲೀಸರಿಂದ ತನಿಖೆ ಸಾಧ್ಯವೇ? ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿರುವ ಲೋಕಾಯುಕ್ತ ಪೊಲೀಸರು, ರಾಜ್ಯದಲ್ಲಿರುವ ಲೋಕಾಯುಕ್ತ ಪೊಲೀಸರಿಂದ ಯಾವುದೇ ರೀತಿ ನ್ಯಾಯಯುತ ತನಿಖೆ ನಡೆಸಲು ಅಸಾಧ್ಯ ಎಂದು ಬಿ.ವೈ.ವಿಜಯೇಂದ್ರ ಅವರು ಅಭಿಪ್ರಾಯಪಟ್ಟರು.

ಇವತ್ತು ಕೋರ್ಟ್ ಆದೇಶ ಮಾಡಿರಬಹುದು; ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವ ಸಲುವಾಗಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ನೀಡುವ ಮುನ್ನ ಈ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆ, ಸಿಬಿಐಗೆ ವಹಿಸಬೇಕು. ಆಗ ಸಿದ್ದರಾಮಯ್ಯನವರು ಗೌರವ ಹೆಚ್ಚಾಗುತ್ತದೆ ಎಂದು ತಿಳಿಸಿದರು.

Author Image

Advertisement