For the best experience, open
https://m.bcsuddi.com
on your mobile browser.
Advertisement

'ಸಿಎಂ ರಾಜೀನಾಮೆಗೆ ಆಗ್ರಹಿಸಿ ಆ. 19ರಂದು ವಿಧಾನಸೌಧದ ಬಳಿ ಪ್ರತಿಭಟನೆ'- ಆರ್.ಅಶೋಕ್‌

06:09 PM Aug 18, 2024 IST | BC Suddi
 ಸಿಎಂ ರಾಜೀನಾಮೆಗೆ ಆಗ್ರಹಿಸಿ ಆ  19ರಂದು ವಿಧಾನಸೌಧದ ಬಳಿ ಪ್ರತಿಭಟನೆ   ಆರ್ ಅಶೋಕ್‌
Advertisement

ಬೆಂಗಳೂರು  : ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರವು ಕಳೆದ 15 ತಿಂಗಳಿನಿಂದ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ನಡಿಗೆ ಭ್ರಷ್ಟಾಚಾರದ ಕಡೆಗೆ ಘೋಷಣೆಯನ್ನು ರಾಜ್ಯದ ಜನರು ಮಾತನಾಡಲು ಆರಂಭಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣ ನಡೆಸಿದ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಸೋಮವಾರ (ಆ.19) ಬೆಳಗ್ಗೆ 11.30 ಕ್ಕೆ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ಸಿನವರು ಗ್ಯಾರಂಟಿ ಕೊಡುತ್ತಾರೆ; ಭ್ರಷ್ಟಾಚಾರ ಮುಕ್ತತೆ ಗ್ಯಾರಂಟಿ ಎಂದು ಜನರು ಆರಂಭದಲ್ಲಿ ಭಾವಿಸಿದ್ದರು. ಆದರೆ, ಈಗ ದಲಿತರ ಸಾವುಗಳು ಗ್ಯಾರಂಟಿ ಆಗಿವೆ. ಜನರ ಅಪೇಕ್ಷೆಗೆ ವಿರುದ್ಧವಾಗಿ ಸರಕಾರ ನಡೆದುಕೊಳ್ಳುತ್ತಿದೆ ಎಂದು ಆಕ್ಷೇಪಿಸಿದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಕ್ಲೀನ್ ಎನ್ನುತ್ತಿದ್ದಾರೆ. ಅದೇನು ಕ್ಲೀನೋ ನನಗೂ ಗೊತ್ತಿಲ್ಲ ಎಂದರಲ್ಲದೆ, ಕಳೆದ ಬಾರಿ ಅವರು ಸಿಎಂ ಆಗಿದ್ದಾಗ 65 ಕೇಸುಗಳಿದ್ದವು. ಹ್ಯೂಬ್ಲೆಟ್ ವಾಚಿನಿಂದ ಹಿಡಿದು ಡಿನೋಟಿಫಿಕೇಶನ್ ರೀಡುವರೆಗೆ ಕೇಸುಗಳಿದ್ದವು. ಅವೆಲ್ಲವನ್ನೂ ಅವರು ಎಸಿಬಿ ಮೂಲಕ ಮುಚ್ಚಿ ಹಾಕಿದ್ದರು ಎಂದು ಟೀಕಿಸಿದರು.

ಅವರು ಯಾವ ನೈತಿಕತೆ ಇಟ್ಟುಕೊಂಡು ಹೀಗೆ ಮಾತನಾಡುತ್ತಾರೋ ಗೊತ್ತಿಲ್ಲ ಎಂದರು. ಗೌರವಾನ್ವಿತ ರಾಜ್ಯಪಾಲರು, 3 ಖಾಸಗಿ ದೂರುಗಳನ್ನು ಪರಿಶೀಲಿಸಿ, ಕಾನೂನು ತಜ್ಞರ ಜೊತೆ ಚರ್ಚಿಸಿ ಈಗ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿದ್ದಾರೆ. ಇದನ್ನು ಕಾಂಗ್ರೆಸ್ಸಿನವರು ಸ್ವಾಗತಿಸಬೇಕಿತ್ತು. ನಾನೇನೂ ತಪ್ಪು ಮಾಡಿಲ್ಲ; ತನಿಖೆಗೆ ತಯಾರಿರುವುದಾಗಿ ಸಿದ್ದರಾಮಯ್ಯನವರು ಹೇಳಬೇಕಿತ್ತು ಎಂದು ನುಡಿದರು.

ಸಿಎಂ ಸಿದ್ದರಾಮಯ್ಯ ಅಧಿವೇಶನದಲ್ಲಿ ಉತ್ತರ ಕೊಡದೆ ಪಲಾಯನ ಮಾಡಿದ್ದಾರೆ. ಜೊತೆಗೆ ಪ್ರಕರಣ ಮುಚ್ಚಿಹಾಕಲು ಬೇಕಾದವರನ್ನು ನೇಮಿಸಿದ್ದಾರೆ. ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರ ಭ್ರಷ್ಟಾಚಾರವನ್ನು ಬೆಂಬಲಿಸಿದೆ. ಯಾವ ನೈತಿಕತೆ ಇಟ್ಟುಕೊಂಡು ಇವರು ಹೋರಾಟ ಮಾಡುತ್ತಾರೆ? ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಸರ್ಕಾರ, ದೆಹಲಿ ಹೈಕಮಾಂಡ್ ಗೆ ಎಟಿಎಂ ಆಗಿದೆ. ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ, ಎಲ್.ಕೆ.ಅಡ್ವಾಣಿ ಮೇಲೆ ಆರೋಪ ಬಂದಾಗ ರಾಜೀನಾಮೆ ಪಡೆಯಲಾಗಿತ್ತು. ಆದರೆ ಈ ಪರಂಪರೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕಾಂಗ್ರೆಸ್ ನಾಯಕರು ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಅಜೆಂಡಾವೇ ಭ್ರಷ್ಟಾಚಾರ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಒಳಗೊಂದು ಹೊರಗೊಂದು ಎಂಬಂತೆ ಇದ್ದಾರೆ. ತಾವು ಸಿಎಂ ಆಗಬೇಕೆಂದೇ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಯಾರಾಗಬೇಕೆಂಬುದು ಅವರ ಪಕ್ಷಕ್ಕೆ ಬಿಟ್ಟ ನಿರ್ಧಾರ. ಮಲ್ಲಿಕಾರ್ಜುನ ಖರ್ಗೆಯವರು ಸುದೀರ್ಘ ರಾಜಕೀಯ ಹಿನ್ನೆಲೆ ಹಾಗೂ ಕಾನೂನು ಪ್ರಕಾರ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿರುವುದು ಸರಿ ಇದೆ ಎಂದರು

Author Image

Advertisement