For the best experience, open
https://m.bcsuddi.com
on your mobile browser.
Advertisement

ಶೀಘ್ರವೇ ಅಯೋಧ್ಯೆಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ; ರಾಮಲಲ್ಲಾನ ದರ್ಶನ!

10:46 AM Apr 25, 2024 IST | Bcsuddi
ಶೀಘ್ರವೇ ಅಯೋಧ್ಯೆಗೆ ರಾಹುಲ್‌ ಗಾಂಧಿ  ಪ್ರಿಯಾಂಕಾ ಗಾಂಧಿ ಭೇಟಿ  ರಾಮಲಲ್ಲಾನ ದರ್ಶನ
Advertisement

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಕಾಂಗ್ರೆಸ್‌ ಬಹಿಷ್ಕರಿಸಿತ್ತು. ಆದರೆ, ಲೋಕಸಭೆ ಚುನಾವಣೆ  ಹೊತ್ತಿನಲ್ಲಿಯೇ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ  ಹಾಗೂ ಪ್ರಿಯಾಂಕಾ ಗಾಂಧಿ ಅವರು ಶೀಘ್ರದಲ್ಲೇ ಅಯೋಧ್ಯೆಯ ರಾಮಮಂದಿರಕ್ಕೆ ತೆರಳಿ ರಾಮಲಲ್ಲಾನ ಆಶೀರ್ವಾದ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ಅಮೇಥಿಯಿಂದ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಕ್ಷೇತ್ರವಾಗಿದ್ದ ರಾಯ್‌ಬರೇಲಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಎರಡೂ ಕ್ಷೇತ್ರಗಳಿಗೆ ಸಹೋದರ-ಸಹೋದರಿ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲು ಅವರು ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತೆರಳದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶ್ರೀರಾಮನ ವಿರೋಧಿ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ರಾಮಮಂದಿರಕ್ಕೆ ಭೇಟಿ ನೀಡುವ ಮೂಲಕ ಕಾಂಗ್ರೆಸ್‌ ರಾಮಮಂದಿರ ವಿರೋಧಿ ಅಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶವಿದೆ ಎಂದು ತಿಳಿದುಬಂದಿದೆ.

Advertisement

ರಾಹುಲ್‌ ಗಾಂಧಿ ಅವರು ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸುತ್ತಿದ್ದು, ಏಪ್ರಿಲ್‌ 26ರಂದು ಮತದಾನ ನಡೆಯಲಿದೆ. ಇನ್ನು ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅಥವಾ ಅವರ ಪತಿ ರಾಬರ್ಟ್‌ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಹುಲ್‌ ಗಾಂಧಿ ಅವರು ಅಮೇಥಿಯಿಂದ 2004ರಿಂದಲೂ ಸ್ಪರ್ಧಿಸಿ, ಗೆಲುವು ಸಾಧಿಸುತ್ತಿದ್ದರು. ಆದರೆ, 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಅವರು ಸೋಲನುಭವಿಸಿದ ಕಾರಣ ವಯನಾಡು ಅವರ ಲೋಕಸಭೆ ಕ್ಷೇತ್ರವಾಗಿದೆ. ಈ ಬಾರಿಯೂ ರಾಹುಲ್‌ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಕೂಡ 2004ರಿಂದ ಸ್ಪರ್ಧಿಸುತ್ತಿದ್ದರು.

Author Image

Advertisement