For the best experience, open
https://m.bcsuddi.com
on your mobile browser.
Advertisement

ಶಿರೂರು ದುರಂತ: ಆರು ಮಂದಿಯ ಮೃತದೇಹ ಪತ್ತೆ, ಮುಂದುವರಿದ ಕಾರ್ಯಾಚರಣೆ

03:55 PM Jul 18, 2024 IST | Bcsuddi
ಶಿರೂರು ದುರಂತ  ಆರು ಮಂದಿಯ ಮೃತದೇಹ ಪತ್ತೆ  ಮುಂದುವರಿದ ಕಾರ್ಯಾಚರಣೆ
Advertisement

ಶಿರೂರು:  ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದ ಅವಘಡದಲ್ಲಿ ಈವರೆಗೆ ಹತ್ತು ಮಂದಿ ಕಣ್ಮರೆಯಾಗಿದ್ದ ಮಾಹಿತಿ ಇದ್ದು, ಈ ಪೈಕಿ ಆರು ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದ್ದಾರೆ.

ಒಂದೇ ಕುಟುಂಬದ ನಾಲ್ಕು ಮತ್ತು ಅದೇ ಕುಟುಂಬದ ಸಂಬಂಧಿ ಜಗನ್ನಾಥ, ಉಳುವರೆ ಗ್ರಾಮದ ಸಣ್ಣಿ ಗೌಡ, ಮೂರು ಟ್ಯಾಂಕರ್ ಹಾಗೂ ಒಂದು ಲಾರಿಯ ಚಾಲಕ ಕಣ್ಮರೆಯಾಗಿರುವುದಾಗಿ ಅವರ ಕುಟುಂಬಗಳು ಮಾಹಿತಿ ನೀಡಿವೆ.ಈ ಪೈಕಿ ಶಿರೂರಿನ ನಾಲ್ವರು, ತಮಿಳುನಾಡಿನ ನಾಮಕ್ಕಲ್'ನ ಚಿಣ್ಣನನ್ ಎಂಬ ಟ್ಯಾಂಕರ್ ಚಾಲಕನ ಮೃತದೇಹ ಪತ್ತೆಯಾಗಿದೆ. ಇನ್ನೊಂದು ಮೃತದೇಹದ ಗುರುತು ಪತ್ತೆ ಕಾರ್ಯ ನಡದಿದೆ' ಎಂದು ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ

ಸಗಡಗೇರಿ ಬಳಿ ಗಂಗಾವಳಿ ನದಿಯಲ್ಲಿ ಬಿದ್ದಿರುವ ಗ್ಯಾಸ್ ಟ್ಯಾಂಕರ್ ನಿಂದ ತುಂಬಿರುವ ಅನಿಲವನ್ನು ಖಾಲಿ ಮಾಡಲು ಎಚ್.ಪಿ.ಸಿ.ಎಲ್ ಕಂಪನಿಯ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಲಿನ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಆ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗಿದೆ' ಎಂದರು.

Advertisement

ನದಿಯಲ್ಲಿ ನಾಪತ್ತೆಯಾದವರಿಗಾಗಿ ಎನ್‌ಡಿಆರ್‌ಎಫ್ ಹಾಗೂ ಎಸ್​ಡಿಆರ್‌ಎಫ್ ತಂಡಗಳು ಬೋಟ್‌ಗಳ ಮೂಲಕ ನಿರಂತರವಾಗಿ ಹುಡುಕಾಟ ಮುಂದುವರಿಸಿವೆ. ಶಿರೂರು ಬಳಿ ಹೆದ್ದಾರಿ ಮೇಲೆ ಬಿದ್ದ ಬೃಹತ್ ಪ್ರಮಾಣದ ಮಣ್ಣನ್ನು 8ಕ್ಕೂ ಹೆಚ್ಚು ಜೆಸಿಬಿ, ಹಿಟಾಚಿ, ಟಿಪ್ಪರ್‌ಗಳನ್ನು ಬಳಸಿಕೊಂಡು ಹೆದ್ದಾರಿಯ ಎರಡೂ ಬದಿಯಿಂದ ನಿರಂತರವಾಗಿ ತೆರವುಗೊಳಿಸಲಾಗುತ್ತಿದೆ. ಆದರೆ ಗುಡ್ಡ ಕುಸಿತವಾದ ಪಕ್ಕದಲ್ಲಿಯೇ ಬೃಹತ್ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು, ಅಕ್ಕಪಕ್ಕದ ಗುಡ್ಡಗಳು ಕೂಡಾ ಕುಸಿಯುವ ಭೀತಿ ಎದುರಾಗಿದೆ. ಈ ಬೆಳವಣಿಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರ ಆತಂಕಕ್ಕೂ ಕಾರಣವಾಗಿದೆ.

Author Image

Advertisement