ಶಿರೂರು ಗುಡ್ಡ ದುರಂತ ಪ್ರಕರಣ; ನದಿಯಲ್ಲಿ ಸಿಕ್ತು ಲಾರಿ ಚಾಲಕನ ಅರ್ಧ ಮೃತದೇಹ…!
ಉತ್ತರ ಕನ್ನಡ: ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ತಮಿಳುನಾಡು ಮೂಲದ ಲಾರಿ ಚಾಲಕ ಶರವಣನ್ ಮೃತದೇಹ ಪತ್ತೆಯಾಗಿದ್ದು, ಡಿಎನ್ಎ ವರದಿಯಲ್ಲಿ ಶರವಣನ್ ಬಾಡಿ ಎಂದು ತಿಳಿದುಬಂದಿದೆ. ಕಾರ್ಯಾಚರಣೆ ವೇಳೆ ಕಳೆದ ನಾಲ್ಕು ದಿನಗಳ ಹಿಂದೆ ಗಂಗೆಕೊಳದಲ್ಲಿ ಹೊಟ್ಟೆಯ ಕೆಳಭಾಗದ ದೇಹ ಮಾತ್ರ ಪತ್ತೆಯಾಗಿತ್ತು. ಇದೀಗ ತಮಿಳುನಾಡು ಮೂಲದ ಲಾರಿ ಚಾಲಕ ಶರವಣನ್ ಮೃತ ದೇಹ ಎಂದು ಉತ್ತರ ಕನ್ನಡ ಎಸ್ಪಿ ನಾರಾಯಣ್ ದೃಢ ಪಡಿಸಿದ್ದಾರೆ. ಗುಡ್ಡ ಕುಸಿತವಾದ ಪಕ್ಕದಲ್ಲೆ ಆತನ ಟ್ಯಾಂಕರ್ ಇತ್ತು. ಅದನ್ನು ಜಿಲ್ಲಾಡಳಿತದವರು ಬೇರೆ ಕಡೆ ಸ್ಥಳಾಂತರ ಮಾಡಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಚಾಲಕ ಶರವಣನ್ ನಾಪತ್ತೆ ಆಗಿದ್ದಾರೆ ಎಂದು ಅವರ ಮಾವ ಸೆಂದೀಲ್ ಎಂಬುವವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಮಾತನಾಡಿದ್ದ ಸೆಂದೀಲ್ , ‘ಶರವಣನ್ ಮೊಬೈಲ್ ಬ್ಯಾಟರಿ ಕಡಿಮೆ ಆಗಿ ಮೊಬೈಲ್ ಸ್ವಿಚ್ ಆಫ್ ಆಗಿರಬಹುದು. ಆದ್ರೆ, ಬಹಳ ದಿನ ಕಳೆದರೂ ಮೊಬೈಲ್ ಆನ್ ಆಗದಿದಕ್ಕೆ ಹುಡುಕಾಟ ನಡೆಸಿದ್ದೇವೆ ಎಂದಿದ್ದರು. ಇನ್ನು ತಮಿಳುನಾಡು ಮೂಲದ ಲಾರಿ ಚಾಲಕ ಶರವಣನ್ ನಾಪತ್ತೆ ಆದ ಕುರಿತು ದೂರು ದಾಖಲಿಸುತ್ತಿದ್ದಂತೆ ಆತನ ಸಂಬಂಧಿಕರು ಶಿರೂರುಗೆ ಬಂದಿದ್ದರು. ಇದೀಗ ನಾಲ್ಕು ದಿನದ ಹಿಂದೆ ಸಿಕ್ಕಿದ್ದ ಅರ್ಧ ದೇಹ, ಶರವಣನ್ ಅವರದ್ದಾಗಿದೆ ಎಂದು ಎಸ್ಪಿ ಖಚಿತಪಡಿಸಿದ್ದಾರೆ.