For the best experience, open
https://m.bcsuddi.com
on your mobile browser.
Advertisement

ವಿಧಾನ ಪರಿಷತ್ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ : ಮತದಾರರು ಇಷ್ಟು.!

08:06 AM Dec 31, 2023 IST | Bcsuddi
ವಿಧಾನ ಪರಿಷತ್ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ   ಮತದಾರರು ಇಷ್ಟು
Advertisement

ಚಿತ್ರದುರ್ಗ :  ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಬಿಡುಗಡೆಗೊಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮತದಾರರ ಅಂತಿಮ ಪಟ್ಟಿ ಪ್ರಕಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕಳೆದ ನವೆಂಬರ್ ಮಾಹೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಡಿಸೆಂಬರ್ 30 ಶನಿವಾರದಂದು ಮತದಾರರ ಅಂತಿಮ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

Advertisement

ಮತದಾರರ ಅಂತಿಮ ಪಟ್ಟಿ ಪ್ರಕಟವಾದ ನಂತರವೂ ಸಹ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.  ಬಳಿಕ ಹೆಚ್ಚುವರಿ (ಸಪ್ಲಿಮೆಂಟರಿ) ಪಟ್ಟಿಯನ್ನು ಸಿದ್ದಪಡಿಸಲಾಗುವುದು ಎಂದರು.

ಮತದಾರರ ಅಂತಿಮ ಪಟ್ಟಿಯನ್ನು ನಗರದ ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ತಹಶೀಲ್ದಾರ್‍ಗಳ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಕಚೇರಿ ವೇಳೆಯಲ್ಲಿ ಪರಿಶೀಲನೆಗೆ ದೊರೆಯುತ್ತದೆ ಎಂದರು.

ಜಿಲ್ಲೆಯಲ್ಲಿ 4615 ಶಿಕ್ಷಕ ಮತದಾರರು: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ  ಮತದಾರರ ಅಂತಿಮ ಪಟ್ಟಿಯಂತೆ ಚಿತ್ರದುರ್ಗ ಜಿಲ್ಲೆಯಲ್ಲಿ 3238 ಪುರುಷರು, 1377 ಮಹಿಳೆಯರು ಸೇರಿದಂತೆ ಒಟ್ಟು 4615 ಶಿಕ್ಷಕ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದರು.

ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 4271 ಮತದಾರರು ಇದ್ದರು. ಅಂತಿಮ ಮತದಾರರ ಪಟ್ಟಿ ಅನ್ವಯ ಮೊಳಕಾಲ್ಮುರು ತಾಲ್ಲೂಕಿನಲ್ಲಿ 253, ಚಳ್ಳಕರೆ 903, ಚಿತ್ರದುರ್ಗ 1519, ಹಿರಿಯೂರು 822, ಹೊಸದುರ್ಗ 665 ಹಾಗೂ ಹೊಳಲ್ಕೆರೆಯಲ್ಲಿ 453 ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 4615 ಶಿಕ್ಷಕ ಮತದಾರರು ಇದ್ದಾರೆ.  ಕರಡು ಪಟ್ಟಿಗೆ ಹೋಲಿಸಿದಾಗ, ಅಂತಿಮ ಪಟ್ಟಿಯಲ್ಲಿ ಹೊಸದಾಗಿ 344 ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಶೇ.40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಅಂಗವಿಕಲ ಮತದಾರರಿಗೆ ಮನೆಯಿಂದ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಈಗಾಗಲೆ ಶೇ. 95 ರಷ್ಟು ಮ್ಯಾಪಿಂಗ್ ಮಾಡಿದ್ದು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟವರ ವಿವರ ಮ್ಯಾಪಿಂಗ್ ಆಗದ ಕಾರಣ, ಅರ್ಹರಿದ್ದರೂ, ಮನೆಯಿಂದಲೇ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ.  ಹೀಗಾಗಿ ಬಿಎಲ್‍ಒಗಳು ಮನೆ ಮನೆ ಭೇಟಿ ಸಂದರ್ಭದಲ್ಲಿ ವಯೋವೃದ್ಧರು ಹಾಗೂ ಅಂಗವಿಕಲರನ್ನು ಗುರುತಿಸಿ ಮಾಡಿ ಮ್ಯಾಪಿಂಗ್ ಮಾಡಲು ತಿಳಿಸಲಾಗಿದೆ.  ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಹ ಅಗತ್ಯ ಸಹಕಾರ ನೀಡಬೇಕು ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಈ ಕಾರ್ಯಕ್ಕೆ ಪಕ್ಷದ ಕಾರ್ಯಕರ್ತರ ಮೂಲಕ ವಯೋವೃದ್ಧರು ಹಾಗೂ ಅಂಗವಿಕಲರ ಮ್ಯಾಪಿಂಗ್ ಮಾಡಿಸಲು ಸೂಕ್ತ ಸಹಕಾರ ನೀಡಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, 2023 ರ ನವೆಂಬರ್ 01 ಅರ್ಹತಾ ದಿನಾಂಕವಾಗಿದ್ದು, ಅರ್ಹತಾ ದಿನಾಂಕದಂತೆ ನಿರಂತರ ಪರಿಷ್ಕರಣೆ ನಡೆಯಲಿದೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರದೇ ಇದ್ದಲ್ಲಿ, ಅಂತಹ ಶಿಕ್ಷಕರು ನೊಂದಣಿ ಮಾಡಿಕೊಳ್ಳಬಹುದು.  ಕಳೆದ ಆರು ವರ್ಷಗಳಲ್ಲಿ, ಕನಿಷ್ಟ ಮೂರು ವರ್ಷಗಳು ನಿರಂತರವಾಗಿ ಪ್ರೌಢಶಾಲೆ ಹಾಗೂ ನಂತರದ ಹಂತದ ಕಾಲೇಜುಗಳು, ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ ಕಾಲೇಜುಗಳಲ್ಲಿ (ಅಧಿಕೃತ ಶಾಲಾ ಕಾಲೇಜುಗಳ ಪಟ್ಟಿಯಲ್ಲಿರುವ) ಬೋಧನಾ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ನಿವಾಸಿಗಳು ನೊಂದಣಿಗೆ ಅರ್ಹರು.  ಅತಿಥಿ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರು ನೊಂದಣಿಗೆ ಅರ್ಹರಲ್ಲ.   ಎಂದು ತಿಳಿಸಿದ ಅವರು, ಹೆಚ್ಚಿನ ವಿವರಗಳು  www.kannadapustakapradhikara.com ವೆಬ್‍ಸೈಟ್‍ನಲ್ಲಿ ಲಭ್ಯವಿರುತ್ತದೆ ಎಂದರು.

Tags :
Author Image

Advertisement