For the best experience, open
https://m.bcsuddi.com
on your mobile browser.
Advertisement

ವಯನಾಡು ಭೂಕುಸಿತ: ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಕಾಲಡಿ ರಕ್ಷಣೆ ನೀಡಿದ ಗಜರಾಜ -ಮನಕಲಕುವ ಸನ್ನಿವೇಶ

09:36 AM Aug 03, 2024 IST | BC Suddi
ವಯನಾಡು ಭೂಕುಸಿತ   ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಕಾಲಡಿ ರಕ್ಷಣೆ ನೀಡಿದ ಗಜರಾಜ  ಮನಕಲಕುವ ಸನ್ನಿವೇಶ
Advertisement

ವಯನಾಡು ಭೀಕರ ಭೂಕುಸಿತದಿಂದ  ಇಡೀ ಊರಿಗೆ ಊರೇ ಸ್ಮಶಾನವಾಗಿತ್ತು. ಇತ್ತ ಸಾಗಬೇಕಾದ ದಿಕ್ಕು ಗೊತ್ತಿಲ್ಲ. ಸಾವು ಕಣ್ಮುಂದೆ ಕೈಚಾಚಿ ನಿಂತಾಗ ಮನಕಲಕುವ ಸನ್ನಿವೇಶವೊಂದು ನಡೆದಿದೆ. ದೇವರ ರೂಪದಲ್ಲಿ ಬಂದ ಗಜರಾಜ ಮುಂಡಕೈ ನಿವಾಸಿ ಸುಜಾತ ಹಾಗೂ ಕುಟುಂಬಕ್ಕೆ ಇಡೀ ರಾತ್ರಿ ಕಾವಲಾಗಿತ್ತು. ಇದು ಆಶ್ಚರ್ಯ ಎನಿಸಿದರು ಸತ್ಯ. ಈ ಕುರಿತು ಖುದ್ದು ಸುಜಾತ ಅವರೇ ಸ್ಥಳೀಯರೊಬ್ಬರಿಗೆ ಮಾಹಿತಿ ನೀಡಿದ್ದಾರೆ.

ವಯನಾಡು ಭೂಕುಸಿತದಲ್ಲಿ ಇಡೀ ಊರಿಗೆ ಊರೇ ಮಣ್ಣು ಪಾಲಾದರೂ ಈ ಕುಟುಂಬ ಬದುಕಿದ್ದು ಮಾತ್ರ ರೋಚಕ. ಸಂಕಷ್ಟದಲ್ಲಿದ್ದ ಸಂತ್ರಸ್ತರಿಗೆ ಆ ಕರಾಳ ರಾತ್ರಿ ಬೆಟ್ಟದಲ್ಲಿ ಗಜರಾಜ ಕಾವಲಾಗಿ ನಿಂತಿದ್ದಾನೆ. ಸಾವಿನ ದವಡೆಯಿಂದ ಪಾರಾಗಿ ಬಂದ ವೃದ್ಧೆ ಸುಜಾತ ಈ ಕುರಿತು ಸ್ಥಳೀಯರೊಬ್ಬರಿಗೆ ಮಾಹಿತಿ ಕೊಟ್ಟಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾತ್ರಿ 4 ಗಂಟೆಯಿಂದ ಭಾರೀ ಮಳೆಯಾಗುತ್ತಿದ್ದರಿಂದ, ಮಧ್ಯರಾತ್ರಿ 1:15ಕ್ಕೆ ಎಚ್ಚರವಾಯಿತು. ದೊಡ್ಡ ಶಬ್ದ ಕೇಳಿಸಿದ ಬೆನ್ನಲ್ಲೇ ನಮ್ಮ ಮನೆಗೆ ನೀರು ನುಗ್ಗಿತು. ನಾವೆಲ್ಲರೂ ಹಾಸಿಗೆಯ ಮೇಲೆ ಕುಳಿತೆವು. ಆಗ ನಮ್ಮ ನೆರೆಹೊರೆಯವರ ಮನೆಗಳ ಅವಶೇಷಗಳ ಜೊತೆಗೆ ದೊಡ್ಡ ಮರದ ದಿಮ್ಮಿಗಳು ಮನೆಯ ಮೇಲೆ ಬಡಿಯುತ್ತಿದ್ದವು. ನಮ್ಮ ಮನೆಯ ಮೇಲ್ಛಾವಣಿ ನಮ್ಮ ಮೇಲೆ ಕುಸಿದು ಬಿದ್ದಿದ್ದು, ನನ್ನ ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಗುಡ್ಡ ಜರಿದು ಮನೆ ಉರುಳಿ ಬಿದ್ದಾಗ ಮನೆಯ ಚಿಮಿಣಿಯಲ್ಲಿ ಸ್ವಲ್ಪ ಜಾಗ ಕಾಣಿಸಿತು. ನಾನು ಇಟ್ಟಿಗೆ ರಾಶಿಯನ್ನು ಸರಿಸಿ ಜಾಗ ಮಾಡಿಕೊಂಡು ಮಗಳು, ಮೊಮ್ಮಗಳು, ಅಳಿಯ ಎಲ್ಲರೂ ಹೊರ ಬಂದು ಬೆಟ್ಟದ ಬಳಿ ಓಡಿದೆವು.

Advertisement

ಹೇಗೋ ಒದ್ದಾಡಿ ಬೆಟ್ಟದ ಬಳಿಗೆ ಬಂದಾಗ ಅಲ್ಲಿ ದೊಡ್ಡ ಕಾಡಾನೆ ನಿಂತಿತ್ತು. ಆಗ ಆನೆ ಬಳಿ ನಿಂತು ಪ್ರಾರ್ಥನೆ ಮಾಡಿದೆವು. ಒಂದು ದೊಡ್ಡ ದುರಂತದಿಂದ ತಪ್ಪಿಸಿಕೊಂಡು ಬಂದಿದ್ದೇವೆ. ನೀನು ನಮಗೇನೂ ಮಾಡಬೇಡಪ್ಪಾ ಎಂದು ನಾನು ಆನೆಯ ಮುಂದೆ ನಿಂತು ಕಣ್ಣೀರು ಹಾಕಿದೆ. ಆನೆಯ ಕಣ್ಣಿನಿಂದಲೂ ನೀರು ಬಂತು. ರಾತ್ರಿ ಬೆಳಗಾಗುವವರೆಗೆ ನಾವು ಆನೆಯ ಕಾಲಿನ ಹತ್ತಿರವೇ ಸಮಯ ಕಳೆದೆವು. ರಾತ್ರಿ ಪೂರ್ತಿ ಮಳೆ, ಸರಿಯಾಗಿ ನಿಂತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಯಾದಾಗ ಎಲ್ಲಿಂದಲೋ ಜನರು ಬಂದರು. ನಮ್ಮನ್ನು ಕಾಪಾಡಲು ನಮ್ಮ ಊರಿನವರು ಯಾರೂ ಬದುಕುಳಿದಿರಲಿಲ್ಲ. ಆಮೇಲೆ ದೂರದೂರಿನಿಂದ ಬಂದ ಜನರು ನಮ್ಮನ್ನು ಕಾಪಾಡಿ ಸುರಕ್ಷಿತ ಜಾಗಕ್ಕೆ ತಲುಪಿಸಿದರು ಎಂದು ಸುಜಾತ ತಿಳಿಸಿದ್ದಾರೆ.

Author Image

Advertisement