ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ವನ್ಯ ಜೀವಿ ವಿಭಾಗದ ಮಂಚೂಣಿ ಸಿಬ್ಬಂದಿಗೆ ವಿಶೇಷ ಭತ್ಯೆ : ಈಶ್ವರ ಖಂಡ್ರೆ

01:39 PM Jul 27, 2024 IST | Bcsuddi
Advertisement

ಬೆಂಗಳೂರು : ವನ್ಯಜೀವಿ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಂಚೂಣಿ ಸಿಬ್ಬಂದಿಗಳಿಗೆ ಕಠಿಣ ಕೆಲಸದ ಭತ್ಯೆ (ಹಾರ್ಡ್ ಶಿಪ್ ಅಲೋಯನ್ಸ್)ಯನ್ನು ಮಂಜೂರು ಮಾಡಿದ್ದು, ಈ ಸಿಬ್ಬಂದಿಯ ಬಹು ದಿನಗಳ ಬೇಡಿಕೆ ಈಡೇರಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

Advertisement

ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿಗಳಿಗೆ ತಲಾ 3500, ಅರಣ್ಯ ರಕ್ಷಕರಿಗೆ 2700 ಹಾಗೂ ಡಿ ದರ್ಜೆ ನೌಕರರಿಗೆ 2000 ರೂ.ಗಳನ್ನು ಮಾಸಿಕ ನೀಡಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.
ರಾಜ್ಯದ ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು, ಚಾಮರಾಜನಗರ, ರಾಮನಗರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಇದರ ನಿಗ್ರಹಕ್ಕಾಗಿ ಆನೆ ಕಾರ್ಯಪಡೆ ರಚಿಸಲಾಗಿದ್ದು, ಇದರಲ್ಲಿ ಕಾರ್ಯ ನಿರ್ವಹಿಸುವ ಹೊರಗುತ್ತಿಗೆ ಸಿಬ್ಬಂದಿಯೂ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಸಿಕ ಕರ್ತವ್ಯ ನಿರ್ವಹಿಸಿದ 6 ದಿನಗಳಿಗೆ 500 ರೂ. ಆಧಾರದಲ್ಲಿ ತಿಂಗಳಿಗೆ ಗರಿಷ್ಠ 2000 ರೂ. (ಷರತ್ತಿಗೆ ಒಳಪಟ್ಟು) ನೀಡಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ನಂಜನಗೂಡು, ಎಚ್.ಡಿ.ಕೋಟೆ, ಸರಗೂರು, ಟಿ. ನರಸೀಪುರ, ಮಂಡ್ಯ, ಪಾಂಡವಪುರ, ನಾಗಮಂಗಲ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿರತೆ ಕಾರ್ಯಪಡೆ, ವನ್ಯ ಜೀವಿಗಳನ್ನು ಹಿಮ್ಮೆಟ್ಟಿಸುವ ಕ್ಷಿಪ್ರ ಸ್ಪಂದನಾ ಪಡೆ ಸಿಬ್ಬಂದಿ ಮತ್ತು ಅರಣ್ಯದೊಳಗಿರುವ ಕಳ್ಳಬೇಟೆ ಶಿಬಿರಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರಿಗೂ ಇದು ಅನ್ವಯಿಸುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ. ತಾವು ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ಮತ್ತು ಹೊರಗುತ್ತಿಗೆ ನೌಕರರು ಚಳಿ, ಮಳೆ, ಗಾಳಿ ಎನ್ನದೆ, ವನ್ಯಜೀವಿಗಳ ದಾಳಿಯ ಅಪಾಯದ ನಡುವೆಯೂ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ಗಮನಿಸಿ, ಈ ವಿಶೇಷ ಭತ್ಯೆ ನೀಡಲು ತೀರ್ಮಾನಿಸಿದ್ದಾಗಿ ತಿಳಿಸಿದ್ದಾರೆ.

 

Advertisement
Next Article