ಲಂಚವಾಗಿ 5 ಕೆಜಿ ಆಲುಗಡ್ಡೆಗೆ ಬೇಡಿಕೆಯಿಟ್ಟಿದ್ದ ಸಬ್‌ಇನ್‌ಸ್ಪೆಕ್ಟರ್ ಸಸ್ಪೆಂಡ್
ಲಕ್ನೋ: ಸಬ್‌ಇನ್‌ಸ್ಪೆಕ್ಟರ್ ಒಬ್ಬರು ಲಂಚವಾಗಿ 5 ಕೆಜಿ ಆಲುಗಡ್ಡೆಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಅಮಾನತುಗೊಂಡ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಡೆದಿದೆ.
ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಸಬ್‌ಇನ್‌ಸ್ಪೆಕ್ಟರ್ ರಾಮ್ ಕೃಪಾಲ್ ಸಿಂಗ್ ಲಂಚ ಕೇಳಿರುವ ಆರೋಪದ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. 'ಆಲೂಗಡ್ಡೆ' ಎಂಬ ಪದವನ್ನು ಲಂಚಕ್ಕಾಗಿ ಕೋಡ್ ಆಗಿ ಬಳಸಲಾಗಿದೆ ಎಂದು ತನಿಖೆಯ ಮೂಲಕ ತಿಳಿದುಬಂದಿದೆ.
ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್‌ಪುರ ಚಾಪುನ್ನಾ ಚೌಕಿಯಲ್ಲಿ ಸಬ್‌ಇನ್‌ಸ್ಪೆಕ್ಟರ್ ರಾಮ್ ಕೃಪಾಲ್ ಸಿಂಗ್ ನಿಯೋಜನೆಗೊಂಡಿದ್ದರು. ಇದೀಗ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕನೌಜ್ ಎಸ್‌ಪಿ ಅಮಿತ್ ಕುಮಾರ್ ಆನಂದ್ ಅವರು ಸಬ್‌ಇನ್‌ಸ್ಪೆಕ್ಟರ್ ಅನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಪ್ರಕರಣದ ಇಲಾಖಾ ತನಿಖೆಗೂ ಆದೇಶಿಸಲಾಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಡಿಯೋದಲ್ಲಿ ಆರೋಪಿ ಪೋಲೀಸ್, ರೈತರೊಬ್ಬರಿಂದ 5 ಕೆಜಿ ಆಲೂಗಡ್ಡೆಗೆ ಬೇಡಿಕೆ ಇಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ಕಷ್ಟ ಎಂದ ರೈತ, 5 ಕೆಜಿ ಬದಲಿಗೆ 2 ಕೆಜಿ ನೀಡುತ್ತೇನೆಂದು ಹೇಳುತ್ತಾರೆ. ಅದಕ್ಕೆ ಆರೋಪಿ ಪೊಲೀಸ್ ಅಧಿಕಾರಿ ಕೋಪಗೊಂಡು, ಕೊನೆಗೆ 3 ಕೆಜಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ.