ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅರ್ಜುನ ಆನೆ ಸಮಾಧಿ ಸ್ಥಳಕ್ಕೆ ಅಕ್ರಮ ಪ್ರವೇಶ: ನಟ ದರ್ಶನ್ ಅಭಿಮಾನಿ ವಿರುದ್ಧ ಅರಣ್ಯ ಇಲಾಖೆ ಎಫ್‌ಐಆರ್‌

12:12 PM May 29, 2024 IST | Bcsuddi
Advertisement

ಹಾಸನ: ಇತ್ತೀಚೆಗೆ ಕಾಡಾನೆ ಸೆರೆ ವೇಳೆ ದುರಂತ ಸಾವಿಗೀಡಾಗಿದ್ದ ದಸರಾ ಆನೆ ಅರ್ಜುನನ ಸಮಾಧಿ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅಭಿಮಾನಿ ವಿರುದ್ಧ ಪ್ರಕರಣ ದಾಖಲಿಸಿದೆ. ಅರಣ್ಯ ಕಾಯಿದೆ 1963 ಮತ್ತು 1969 ರ ಅಡಿಯಲ್ಲಿ ನಟ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ಹೆಚ್.ಡಿ.ಕೋಟೆ ನಿವಾಸಿ ನವೀನ್ ವಿರುದ್ಧ ಯಸಳೂರು ವಲಯ ಅರಣ್ಯಾಧಿಕಾರಿಗಳು ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ. ಸಕಲೇಶಪುರ ತಾಲೂಕಿನ ದಬ್ಬೆಕಟ್ಟೆ ಮೀಸಲು ಅರಣ್ಯದಲ್ಲಿ ಇತ್ತೀಚೆಗೆ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿದ್ದ ನವೀನ್ ಮತ್ತು ಆತನ ನೇತೃತ್ವದಲ್ಲಿ ಹಲವರು ಅತಿಕ್ರಮ ಪ್ರವೇಶ ಮಾಡಿದ್ದರು. ಅಲ್ಲದೆ ಅರ್ಜುನ ಆನೆ ಸಮಾಧಿ ಭೂಮಿಯನ್ನು ಅಗೆದು ಕಲ್ಲಿನ ಸ್ಲಾಬ್‌ಗಳಿಂದ ಬೇಲಿ ಹಾಕಿ ಸಮಾಧಿಯನ್ನು ವಿರೂಪಗೊಳಿಸಿದ್ದರು ಎಂದು ಆರೋಪಿಸಲಾಗಿದೆ. ಈ ನಿಟ್ಟಿನಲ್ಲಿ ಸಮಾಧಿ ಸುತ್ತ ಬೇಲಿ ಹಾಕಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಥಳೀಯರು ನೀಡಿದ್ದ ದೂರಿನ ಆಧಾರದ ಮೇಲೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಏನಿದು ಪ್ರಕರಣ? ಈ ಹಿಂದೆ ಹಾಸನದ ಯಸಳೂರಿನಲ್ಲಿ ಕಾಡಾನೆ ಸೆರೆ ವೇಳೆ ದಸರಾ ಆನೆ ಅರ್ಜುನ ಮೃತಪಟ್ಟಿತ್ತು. ಆನೆಯನ್ನು ಅಲ್ಲಿಯೇ ದಬ್ಬೆಕಟ್ಟೆ ಮೀಸಲು ಅರಣ್ಯದಲ್ಲಿ ಸಮಾಧಿ ಮಾಡಲಾಗಿತ್ತು. ಹಲವು ದಿನಗಳ ಬಳಿಕ ಈ ಸಮಾಧಿ ಸ್ಥಳಕ್ಕೆ ನಟ ದರ್ಶನ್ ಭೇಟಿ ನೀಡಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅರ್ಜುನ ಆನೆ ಸಮಾಧಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕುರಿತು ಟ್ವೀಟ್ ಮಾಡಿ, ಸ್ಮಾರಕ ನಿರ್ಮಿಸುವಂತೆ ಸರ್ಕಾರಕ್ಕೆ ಮತ್ತು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಬಳಿಕ ಸಮಾಧಿ ಸ್ಥಳಕ್ಕೆ ಕಲ್ಲಿನ ಸ್ಲಾಬ್ ಗಳನ್ನು ಕೂಡ ನೀಡಿದ್ದರು. ಈ ವಿಚಾರ ಸುದ್ದಿಯಾಗುತ್ತಲೇ ಅರಣ್ಯ ಇಲಾಖೆ ದರ್ಶನ್ ನೆರವನ್ನು ತಿರಸ್ಕರಿಸಿತ್ತು. ಆದರೆ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡ ಹೆಚ್.ಡಿ.ಕೋಟೆ ನಿವಾಸಿ ನವೀನ್ ಮತ್ತು ಆತನ ತಂಡ ಅರ್ಜುನ ಆನೆ ಸಮಾಧಿ ಸ್ಥಳಕ್ಕೆ ತೆರಳಿ ಅಲ್ಲಿ ಸಮಾಧಿ ನಿರ್ಮಿಸಲು ಮುಂದಾಗಿ ಅರಣ್ಯ ಇಲಾಖೆ ಅನುಮತಿ ಇಲ್ಲದೇ ಭೂಮಿಯನ್ನು ಅಗೆದು ವಿರೂಪಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಸ್ಥಳೀಯರು ನೀಡಿದ ದೂರಿನ ಆಧಾರದ ಮೇಲೆ ಅರಣ್ಯ ಇಲಾಖೆ ನವೀನ್ ಮತ್ತು ಆತನ ಸಂಗಡಿಗರ ವಿರುದ್ಧ ಪ್ರಕರಣ ದಾಖಲಿಸಿದೆ.

Advertisement

Advertisement
Next Article