For the best experience, open
https://m.bcsuddi.com
on your mobile browser.
Advertisement

ರೈತರ 'ದೆಹಲಿ ಚಲೋ'ಗೆ ಕರೆ: ಹರಿಯಾಣದಲ್ಲಿ ಬಿಗಿ ಬಂದೋಬಸ್ತ್, ಇಂಟರ್ನೆಟ್ ಸ್ಥಗಿತ

04:31 PM Feb 11, 2024 IST | Bcsuddi
ರೈತರ  ದೆಹಲಿ ಚಲೋ ಗೆ ಕರೆ  ಹರಿಯಾಣದಲ್ಲಿ ಬಿಗಿ ಬಂದೋಬಸ್ತ್  ಇಂಟರ್ನೆಟ್ ಸ್ಥಗಿತ
Advertisement

ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ 200 ಕ್ಕೂ ಹೆಚ್ಚು ರೈತ ಸಂಘಗಳು ಫೆಬ್ರವರಿ 13 ರಂದು ರೈತರ 'ದೆಹಲಿ ಚಲೋ'ಗೆ ಕರೆ ನೀಡಿವೆ.ಈ ನಿಟ್ಟಿನಲ್ಲಿ ರ್ಯಾಲಿಗೆ ಮುಂಚಿತವಾಗಿ ಪಂಚಕುಲದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದು, ಹರಿಯಾಣದ 7 ಜಿಲ್ಲೆಗಳಲ್ಲಿ ಮೊಬೈಲ್ ಕರೆಗಳು, ಎಸ್ಸೆಮ್ಮೆಸ್, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ಈ 'ದೆಹಲಿ ಚಲೋ' ಪ್ರತಿಭಟನೆಯ ಉದ್ದೇಶವಾಗಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ.

ಹರಿಯಾಣ ಆಡಳಿತವು ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ, ಈ ಹಿಂದೆ ರೈತ ಸಂಘಟನೆಗಳು ದೆಹಲಿಯಲ್ಲಿ ದೀರ್ಘಕಾಲದ ಪ್ರತಿಭಟನೆ ನಡೆಸಿದಾಗ ಉಂಟಾಗಿದ್ದ ಹಲವು ಅಹಿತಕರ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಹರಿಯಾಣ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಧ್ವನಿ ಕರೆಗಳನ್ನು ಹೊರತುಪಡಿಸಿ ಮೊಬೈಲ್ ನೆಟ್ವರ್ಕ್ಗಳಲ್ಲಿ ಒದಗಿಸಲಾದ ಬೃಹತ್ ಎಸ್ಎಂಎಸ್ ಮತ್ತು ಎಲ್ಲಾ ಡಾಂಗಲ್ ಸೇವೆಗಳನ್ನು ಅಮಾನತುಗೊಳಿಸಲಾಗುತ್ತದೆ. ಈ ಆದೇಶವು ಫೆಬ್ರವರಿ 11 ರ ಬೆಳಗ್ಗೆ 6 ರಿಂದ ಫೆಬ್ರವರಿ 13 ರ ರಾತ್ರಿ 11:59 ರವರೆಗೆ ಜಾರಿಯಲ್ಲಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Advertisement

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹರಿಯಾಣ ಪೊಲೀಸರು 50 ಕಂಪನಿಗಳ ಕೇಂದ್ರೀಯ ಅರೆಸೇನಾ ಪಡೆಗಳನ್ನು ನಿಯೋಜಿಸಿದ್ದಾರೆ. ಪ್ರತಿಭಟನಾ ನಿರತ ರೈತರು ಯೋಜಿತ ಮೆರವಣಿಗೆಯಲ್ಲಿ ಅನುಮತಿ ಇಲ್ಲದೆ ಭಾಗವಹಿಸದಂತೆ ಮನವಿ ಮಾಡಲಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದರೆ ಕಠಿಣ ಕ್ರಮ ಕೈಗೊಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Author Image

Advertisement