For the best experience, open
https://m.bcsuddi.com
on your mobile browser.
Advertisement

ರೀಲ್ಸ್ ಗೀಳು - ಸಮವಸ್ತ್ರದಲ್ಲಿ ರೀಲ್ಸ್ ಮಾಡೋ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ನಗರ ಪೊಲೀಸ್ ಆಯುಕ್ತರು

10:24 AM Jul 23, 2024 IST | Bcsuddi
ರೀಲ್ಸ್ ಗೀಳು   ಸಮವಸ್ತ್ರದಲ್ಲಿ ರೀಲ್ಸ್ ಮಾಡೋ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ನಗರ ಪೊಲೀಸ್ ಆಯುಕ್ತರು
Advertisement

ಬೆಂಗಳೂರು : ಸಮವಸ್ತ್ರದಲ್ಲಿರುವ ಫೋಟೋ / ವಿಡಿಯೋ / ರೀಲ್ಸ್ ಸೇರಿದಂತೆ ಇಲಾಖೆ ಹಾಗೂ ಪೊಲೀಸ್ ಕರ್ತವ್ಯಗಳಿಗೆ ಸಂಬಂಧಿಸದ ಯಾವುದೇ ವಿಷಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡದಂತೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನ ಉದ್ದೇಶಿಸಿ ಆದೇಶಿಸಿರುವ ನಗರ ಪೊಲೀಸ್ ಆಯುಕ್ತರು, ''ಸಮವಸ್ತ್ರದಲ್ಲಿರುವ ಫೋಟೋ / ರೀಲ್ಸ್ / ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಹಾಗೂ ಪೊಲೀಸ್ ಇಲಾಖೆಯ ಅಧಿಕೃತ ಕೆಲಸಗಳ ಕುರಿತು ಅನಿಸಿಕೆ ವ್ಯಕ್ತಪಡಿಸುವುದು ಇಲಾಖೆಯ ನಿಯಮ ಮತ್ತು ಪಾಲನೆಗಳಿಗೆ ವಿರುದ್ಧವಾಗಿದೆ. ಇಲಾಖೆಗೆ ಸಂಬಂಧಪಡದೇ ಇರುವ ವಿಷಯಗಳು ಇಲಾಖೆಯ ಘನತೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪೊಲೀಸ್ ಸಮವಸ್ತ್ರವು ಪೊಲೀಸರ ಬದ್ಧತೆ, ಸಮರ್ಪಣೆ ಮತ್ತು ಹೊಣೆಗಾರಿಕೆಯ ಸಂಕೇತವಾಗಿದೆ. ಆದ್ದರಿಂದ ಯಾವುದೇ ಸಾರ್ವಜನಿಕ ಅಥವಾ ಡಿಜಿಟಲ್ ಫೋರಮ್‌ ನಲ್ಲಿ ಇದರ ಬಳಕೆಯು ಈ ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕಾಗುತ್ತದೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮ (ನಡತೆ) ಪ್ರಕಾರ ಯಾವುದೇ ಸರ್ಕಾರಿ ನೌಕರನು ಅಧಿಕೃತವಾದ ಯಾವುದೇ ದಾಖಲೆ ಅಥವಾ ಮಾಹಿತಿಯನ್ನ ಮಾಧ್ಯಮಗಳು ಅಥವಾ ಸಾಮಾಜಿಕ‌ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ. ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಮಾನ್ಯತೆ ಪಡೆದ ಅಧಿಕೃತ ಅಧಿಕಾರಿ ಮಾತ್ರವೇ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಅಧಿಕೃತ ಮಾಹಿತಿ ಹಂಚಿಕೊಳ್ಳಲು ಅವಕಾಶವಿದೆ" ಎಂಬುದನ್ನ ನೆನಪಿಸಿದ್ದಾರೆ‌. ತಮ್ಮ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ / ಸಿಬ್ಬಂದಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ವೃತ್ತಿಗೆ ಸಂಬಂಧ ಪಡದ ವಿಷಯಗಳ ಕುರಿತು, ಪೊಲೀಸ್ ಸಮವಸ್ತ್ರದಲ್ಲಿ ಫೋಟೋಗಳು, ವಿಡಿಯೋಗಳು. ರೀಲ್ಸ್ ಗಳು ಇತ್ಯಾದಿಗಳನ್ನು ಹರಿಬಿಡದಂತೆ ಜಾಗೃತಗೊಳಿಸುವಂತೆ, ಹಾಗೂ ಯಾವುದೆ ಲೋಪ ಕಂಡುಬಂದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಲ್ಲಾ ವಿಭಾಗಗಳ ಡಿಸಿಪಿಗಳಿಗೆ ಸೂಚಿಸಲಾಗಿದೆ.

Advertisement
Author Image

Advertisement