For the best experience, open
https://m.bcsuddi.com
on your mobile browser.
Advertisement

ರಾಜ್ಯಾಧ್ಯಕ್ಷರ ನೇಮಕದಿಂದ ಬಿಜೆಪಿಯ ನಾಯಕರಲ್ಲಿ ಅಸಮಧಾನ' - ಸಿಎಂ

01:47 PM Nov 18, 2023 IST | Bcsuddi
ರಾಜ್ಯಾಧ್ಯಕ್ಷರ ನೇಮಕದಿಂದ ಬಿಜೆಪಿಯ ನಾಯಕರಲ್ಲಿ ಅಸಮಧಾನ    ಸಿಎಂ
Advertisement

ಮೈಸೂರು:ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡದೇ, ಶಾಂತಿಯುತವಾದ ವಾತಾವರಣವನ್ನು ಸರ್ಕಾರ ನಿರ್ಮಿಸುತ್ತಿದೆ. ಬಿಜೆಪಿಯವರು ಸರ್ಕಾರದ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳಿಗೆ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಉತ್ತರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಮಾಧ್ಯಮದವರೊಂದಿಗೆ ಮಾತನಾಡಿ,ಬಿಜೆಪಿಯ ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪ್ರತಿಪಕ್ಷದ ನಾಯಕರು ಯಾರಾದರೂ ನಮಗೆ ಅಭ್ಯಂತರವಿಲ್ಲ. ಜನರ ಆಶೀರ್ವಾದದಿಂದ ಸರ್ಕಾರ ರಚಿಸಿರುವ ನಮ್ಮ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುತ್ತಿದೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡದೇ, ಶಾಂತಿಯುತವಾದ ವಾತಾವರಣವನ್ನು ಸರ್ಕಾರ ನಿರ್ಮಿಸುತ್ತಿದೆ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ಯವರು ವಿವೇಕಾನಂದ ಎಂಬುವವರ ವರ್ಗಾವಣೆ ಬಗ್ಗೆ ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿವೇಕಾನಂದ ಎಂಬುವವರು ಮೈಸೂರು ಗ್ರಾಮಾಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದಾರೆ. ಅವರ ಬಗ್ಗೆ ಮಾತನಾಡಲಾಗಿದೆಯೆ ಹೊರತು ಪೋಲಿಸ್ ಅಧಿಕಾರಿ ಬಗ್ಗೆಯಲ್ಲ, ವಿವಿಪುರಂ

Advertisement

ಇನ್ಸ್ ಪೆಕ್ಟರ್ ವಿವೇಕಾನಂದ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ, ವರ್ಗಾವಣೆಯಾಗಿರುವ ಬಗ್ಗೆ ಸ್ಥಳೀಯ ಶಾಸಕರನ್ನು ಕೇಳಲಿ ಎಂದರು.

ಕಾಂಗ್ರೆಸ್ ವಿರುದ್ಧ ಬಿಜೆಪಿ ಪೋಸ್ಟರ್ ಚಳವಳಿ ಪ್ರಾರಂಭಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜನ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವ ಕನಸು ಕಂಡಿದ್ದರು. ಆದರೆ ಜನ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿರುವುದು ಅವರನ್ನು ಆತಂಕಕ್ಕೆ ದೂಡಿದ್ದು, ಇದರಿಂದ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ.ಸುಳ್ಳು ಆರೋಪಗಳಿಗೆ ಉತ್ತರ ನೀಡುವುದಿಲ್ಲ ಎಂದರು.

ಪೆನ್ ಡ್ರೈವ್ ನಲ್ಲಿ ಸಾಕಷ್ಟು ಮಾಹಿತಿಗಳಿದ್ದು, ಆಡಳಿತ ಪಕ್ಷದವರು ಅದನ್ನು ಬಹಿರಂಗಗೊಳಿಸದಂತೆ ಮನವಿ ಮಾಡಿದ್ದಾರೆ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಪೆನ್ ಡ್ರೈವ್ ಹೇಳಿಕೆಯ ನಂತರ ವಿಧಾನಸಭೆ ಅಧಿವೇಶನ ನಡೆದರೂ, ಅದರ ಬಗ್ಗೆ ಅವರು ಪ್ರಸ್ತಾಪ ಮಾಡಲಿಲ್ಲವೇಕೆ? ಪೆನ್ ಡ್ರೈವ್ ಬಹಿರಂಗಗೊಳಿಸಬೇಡಿ ಎಂದು ಮನವಿ ಮಾಡಿದವರು ಯಾರು ಎಂಬ ಮಾಹಿತಿಯನ್ನು ನೀಡಲಿ ಎಂದರು.

ಮಾಜಿ ಮುಖ್ಯಮಂತ್ರಿಯಾಗಿದ್ದು ಕೊಂಡು ವಿದ್ಯುತ್ ಕಳವು ಮಾಡಿರುವ ಕುಮಾರಸ್ವಾಮಿಯವರಿಗೆ ಇಂತಹ ಹೇಳಿಕೆಗಳನ್ನು ನೀಡಲು ಯಾವ ನೈತಿಕತೆಯೂ ಇಲ್ಲ. ದಂಡ ಕಟ್ಟುವ ಮೂಲಕ ವಿದ್ಯುತ್ ಕಳವು ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಚಿಕ್ಕದಾದರೂ ಅಪರಾಧ ಅಪರಾಧವೇ ಎಂದರು.

ಇಂದು ಚುನಾವಣೆ ನಡೆದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಚುನಾವಣೆಯಲ್ಲಿ ಕೇವಲ 66 ಸೀಟು ಪಡೆದು ವಿರೋಧ ಪಕ್ಷದಲ್ಲಿ ಕುಳಿತಿದ್ದಾರೆ. ಅವರ ಮಗ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದರಿಂದ ಅವರ ಪಕ್ಷದ ಅನೇಕ ನಾಯಕರು ಅಸಮಧಾನಗೊಂಡಿದ್ದಾರೆ. ಇನ್ನು ಸ್ಪಲ್ಪ ದಿನಗಳಲ್ಲಿ ಬಿಜೆಪಿಯ ಪರಿಸ್ಥಿತಿಯನ್ನು ಎಲ್ಲರೂ ನೋಡಬಹುದು ಎಂದರು.

Author Image

Advertisement