ಯತೀಂದ್ರ ಸಿದ್ದರಾಮಯ್ಯಗೆ ಮೇಲ್ಮನೆ ಚುನಾವಣೆಗೆ ಟಿಕೆಟ್ ಫಿಕ್ಸ್-ಅಸಮಾಧಾನ ಭುಗಿಲೇಳುವ ಮುನ್ಸೂಚನೆ!
ದೆಹಲಿ/ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಒತ್ತಡದ ನಡುವೆಯೂ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರಿಗೆ ಟಿಕೆಟ್ ನೀಡೋದು ಪಕ್ಕಾ ಆಗಿದೆ ಎಂದು ಹೇಳಲಾಗುತ್ತಿದೆ. ಯತೀಂದ್ರ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತಂದೆಯವರಿಗಾಗಿ ವರುಣಾ ಸೀಟ್‌ಅನ್ನು ಬಿಟ್ಟುಕೊಟ್ಟವರಾಗಿದ್ದು, ಅವರ ತ್ಯಾಗಕ್ಕೆ ಪ್ರತಿಫಲವೆಂಬಂತೆ ಇದೀಗ ಮೇಲ್ಮನೆಯ ಸ್ಥಾನವನ್ನು ನೀಡಲು ಕಾಂಗ್ರೆಸ್ ಮುಂದಾಗಿದೆ. ನಿನ್ನೆ ನೂರಕ್ಕೂ ಅಧಿಕ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಕಾಂಗ್ರೆಸ್ ಹೈಕಮಾಂಡ್ ಬಳಿ ಬೇಟಿಗೆ ತೆರಳಿದ ಸಿಎಂ ಹಾಗೂ ಡಿಸಿಎಂ ಒಂದೆರಡು ಸುತ್ತು ಚರ್ಚೆ ನಡೆಸಿದರೆಂದು ಮೂಲಗಳು ತಿಳಿಸಿವೆ. ಏಳು ಸ್ಥಾನಗಳಿಗೆ ಸುಮಾರು ಮುನ್ನೂರಕ್ಕೂ ಅಧಿಕ ಅಕಾಂಕ್ಷಿತರು ಇರುವುದರಿಂದ ಸಿಎಂ ಹಾಗೂ ಡಿಸಿಎಂ ಅವರಿಗೆ ದಿಕ್ಕು ತೋಚದಂತಾಗಿದೆ. ಆದರೂ ಒಂದಕ್ಕೆ ನಾಲ್ಕೈದು ಆಕಾಂಕ್ಷಿತರ ಹೆಸರುಳ್ಳ ಮೂವತೈದು ಮಂದಿಯ ಅಂತಿಮ ಒಟ್ಟಿಯೊಂದನ್ನು ಕೈಯಲ್ಲಿಟ್ಟುಕೊಂಡು ಕುಳಿತಿದ್ದು, ಇಂದು ನಡೆಯಲಿರುವ ಹೈಕಮಾಂಡ್ ಜೊತೆಗಿನ ಸಭೆಯಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ, ಆ ಬಳಿಕವೇ ಹೈಕಮಾಂಡ್ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಪರಮೇಶ್ವರ್ ಅಸಮಾಧಾನ ಮೇಲ್ಮನೆಯ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ತಯಾರಿಕೆಯಲ್ಲಿ ನಮ್ಮಂಥ ಹಿರಿಯರ ಅಭಿಪ್ರಾಯವನ್ನು ಕೇಳಬೇಕು ಅಂತಾ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ನಿನ್ನೆ ದೆಹಲಿಗೆ ತೆರಳುವ ಮುನ್ನ ಸಿಎಂ ಮತ್ತು ಡಿಸಿಎಂ ಅವರು ರಹಸ್ಯವಾಗಿ ಮೀಟಿಂಗ್ ಮಾಡಿ ತಾವೇ ತಾವು ಪಟ್ಟಿಯನ್ನು ಸಿದ್ದ ಮಾಡಿಕೊಂಡಿದ್ದಾರೆಂಬುದು ಪರಮೇಶ್ವರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಬೇರೆ ಹೇಳಬೇಕಿಲ್ಲ. ಇನ್ನು, ವಿಧಾನಪರಿಷತ್ ಟಿಕೆಟ್ ಗಾಗಿ ಸಾಕಷ್ಟು ಲಾಬಿ ಮಾಡಿದ ಕಾಂಗ್ರೆಸ್ ಪ್ರಮುಖ ಆಕಾಂಕ್ಷೆಗಳು ತಮಗೆ ಟಿಕೆಟ್ ಸಿಗಲಿಲ್ಲವೆಂದರೆ ಪಕ್ಷದ ವಿರುದ್ಧ ಬಂಡೇಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.