ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮೇಕಪ್ ಮಾಡಲು ಕರೆದು, ಬ್ಯೂಟಿಷಿಯನ್ ಮನೆಯಲ್ಲಿ ಕಳ್ಳತನ ಮಾಡಿದ ಖತರ್ನಾಕ್ ಕಳ್ಳರು..!

11:09 AM May 04, 2024 IST | Bcsuddi
Advertisement

ಬೆಂಗಳೂರು: ಕೆಂಪೇಗೌಡ ನಗರ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

‘ಚಾಮರಾಜಪೇಟೆ ದಾಸಪ್ಪ ಗಾರ್ಡನ್‌ನ ಸಿ. ಆನಂದ್ (34), ಶ್ರೀನಗರ ರಾಘವೇಂದ್ರ ಬ್ಲಾಕ್‌ನ ಬಿ.ಕೆ. ನಾರಾಯಣ (43) ಹಾಗೂ ಕುಮಾರಸ್ವಾಮಿ ಲೇಔಟ್‌ನ ಎಂ. ಕಿರಣ್ (33) ಬಂಧಿತರು. ಇವರಿಂದ ₹4 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹3.70 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.

‘ಆರೋಪಿ ಕಿರಣ್ ಸಲೂನ್ ನಡೆಸುತ್ತಿದ್ದ. ಆನಂದ್ ಲಿಫ್ಟ್‌ ಟೆಕ್ನಿಷಿಯನ್ ಆಗಿದ್ದ. ನಾರಾಯಣ್ ಆಹಾರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಸ್ನೇಹಿತರಾಗಿದ್ದ ಮೂವರೂ ಸಂಚು ರೂಪಿಸಿ ಕಳ್ಳತನ ಮಾಡಿದ್ದರು. ಕದ್ದ ಚಿನ್ನಾಭರಣ ಹಾಗೂ ಹಣವನ್ನು ಹಂಚಿಕೊಂಡು ತಲೆಮರೆಸಿಕೊಂಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಮೇಕಪ್’ ನಾಟಕ: ‘ಕೆಂಪೇಗೌಡ ನಗರ ಠಾಣೆ ವ್ಯಾಪ್ತಿಯಲ್ಲಿ ಬಟ್ಟೆ ವ್ಯಾಪಾರಿಯೊಬ್ಬರು ನೆಲೆಸಿದ್ದಾರೆ. ಅವರ ಮಗಳು ಬ್ಯೂಟಿಷಿಯನ್ ಆಗಿದ್ದಾರೆ. ಆರೋಪಿ ಕಿರಣ್, ಬ್ಯೂಟಿಷಿಯನ್ ಪರಿಚಯ ಮಾಡಿಕೊಂಡಿದ್ದ. ನಂತರ ಅವರ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಇರುವುದನ್ನು ತಿಳಿದುಕೊಂಡಿದ್ದ. ಕಳ್ಳತನ ಮಾಡಲು ಸ್ನೇಹಿತರ ಜೊತೆ ಸೇರಿ ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

‘ದೇವರ ಹುಂಡಿಗೆ ₹20 ಸಾವಿರ’ ‘ಕೃತ್ಯದ ಬಳಿಕ ಆರೋಪಿಯೊಬ್ಬ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ. ಕಳ್ಳತನದಿಂದ ಬಂದಿದ್ದ ಹಣದಲ್ಲಿಯೇ ₹20 ಸಾವಿರನ್ನು ದೇವರ ಹುಂಡಿಗೆ ಹಾಕಿದ್ದನೆಂಬುದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಉಚಿತ ಮೇಕಪ್ ಮಾಡಿಸುವುದಾಗಿ ಹೇಳಿ ನಾಲ್ವರು ಯುವತಿಯರನ್ನು ಆರೋಪಿ ನಾರಾಯಣ್ ತನ್ನ ಮನೆಗೆ ಕರೆಸಿದ್ದ. ಮೇಕಪ್ ಮಾಡಬೇಕೆಂದು ಹೇಳಿ ಬ್ಯೂಟಿಷಿಯನ್‌ ಅವರನ್ನೂ ಮನೆಗೆ ಕರೆಸಲಾಗಿತ್ತು. ಮೇಕಪ್ ಮಾಡುವ ಸಂದರ್ಭದಲ್ಲಿ ಬ್ಯೂಟಿಷಿಯನ್ ಪರ್ಸ್‌ನಲ್ಲಿದ್ದ ಬೀಗದ ಕೀ ಕದ್ದಿದ್ದ ಆರೋಪಿಗಳು, ಅದನ್ನು ಸಮೀಪದ ಅಂಗಡಿಗೆ ತೆಗೆದುಕೊಂಡು ಹೋಗಿ ನಕಲಿ ಕೀ ಮಾಡಿಸಿದ್ದರು. ನಂತರ ಪರ್ಸ್‌ನಲ್ಲಿ ಅಸಲಿ ಕೀ ಇರಿಸಿದ್ದರು. ಕೆಲಸ ಮುಗಿಸಿ ಬ್ಯೂಟಿಷಿಯನ್ ಮನೆಗೆ ವಾಪಸು ಹೋಗಿದ್ದರು’ ಎಂದು ತಿಳಿಸಿದರು.

‘ಮಾರ್ಚ್ 29ರಂದು ಬ್ಯೂಟಿಷಿಯನ್ ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ಸಂದರ್ಭದಲ್ಲಿ ನಕಲಿ ಕೀ ಬಳಸಿ ಒಳನುಗ್ಗಿದ್ದ ಆರೋಪಿಗಳು, ಚಿನ್ನಾಭರಣ ಹಾಗೂ ನಗದು ದೋಚಿ ಪರಾಗಿಯಾಗಿದ್ದರು’ ಎಂದು ಹೇಳಿದರು.

‘ಮನೆಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ನಿಷ್ಕ್ರಿಯಗೊಂಡಿತ್ತು. ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಮನೆ ಸಮೀಪದ ಬೇರೊಂದು ಕ್ಯಾಮೆರಾದಲ್ಲಿ ಆರೋಪಿಗಳು ಆಟೊದಲ್ಲಿ ಹೋಗಿದ್ದು ಗೊತ್ತಾಗಿತ್ತು. ಅದರ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ಕೈಗೊಂಡಾಗ ಆರೋಪಿಗಳ ಸುಳಿವು ಪತ್ತೆಯಾಯಿತು’ ಎಂದು ತಿಳಿಸಿದರು. ಕಳ್ಳತನ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿರುವ ಕೆಂಪೇಗೌಡ ನಗರ ಪೊಲೀಸರ ತಂಡಕ್ಕೆ ₹25 ಸಾವಿರ ಬಹುಮಾನ ಘೋಷಿಸಲಾಗಿದೆ ಎಂದು ಬಿ. ದಯಾನಂದ್, ನಗರ ಪೊಲೀಸ್ ಕಮಿಷನರ್ ಹೇಳಿದ್ದಾರೆ

Advertisement
Next Article