ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮೆಕ್ಕೆಜೋಳ ಬೆಳೆಯಲ್ಲಿ ಲದ್ದಿಹುಳು ಕಾಟ, ಹತೋಟಿ ಕ್ರಮಗಳಿಗೆ ಹೀಗೆ ಮಾಡಿ.!

07:40 AM Jul 03, 2024 IST | Bcsuddi
Advertisement

 

Advertisement

 ದಾವಣಗೆರೆ : ದಾವಣಗೆರೆ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳ ಪ್ರಮುಖ ಬೆಳೆಯಾಗಿದ್ದು, ಉತ್ತಮ ಮಳೆಯಾಗಿದ್ದರಿಂದ ತಾಲ್ಲೂಕಿನಾದ್ಯಂತ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಬಿತ್ತನೆಯಿಂದ ಹಿಡಿದು 15 ರಿಂದ 20 ದಿನದ ಮೆಕ್ಕೆಜೋಳ ಬೆಳೆ ಇದ್ದು ಅಲ್ಲಲ್ಲಿ ಸೈನಿಕ ಹುಳುವಿನ ಬಾಧೆ ್ಲ ಕಂಡು ಬಂದಿದ್ದು ರೈತರು ಹತೋಟಿ ಕ್ರಮಗಳನ್ನು ಕೈಗೊಳ್ಳುವಂತೆ ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಲದ್ದಿಹುಳುವಿನ ಗುರುತಿಸುವಿಕೆ: ಬೆಳೆದ ಹುಳುವಿನ ಕಪ್ಪುತಲೆಯ ಮುಂಭಾಗದಲ್ಲಿ ತಲೆ ಕೆಳಗಾದ ವೈ.ಆಕೃತಿಯ ಗುರುತು ಹಾಗೂ ಹುಳದ ಹಿಂಭಾಗದಲ್ಲಿ ನಾಲ್ಕು ದಟ್ಟವಾದ ಕಂದು ಬಣ್ಣದ ಚುಕ್ಕೆಗಳು, ಚೌಕಾಕಾರದಲ್ಲಿ ಕಂಡುಬರುತ್ತವೆ. ಹುಳುಗಳು ಎಲೆಗಳನ್ನು ಕೆರೆದು ತಿನ್ನುವುದರಿಂದ ನೀಳವಾದ, ಚಿಂದಿಯಂತಾದ ರಂಧ್ರಗಳು ಕಾಣಿಸಿಕೊಳ್ಳುತ್ತವೆ.  ಎಲೆ ಸುಳಿಯನ್ನು ತಿಂದು ಹಾಳು ಮಾಡುತ್ತವೆ,  ಆ ಸುಳಿಯಲ್ಲಿ ತೇವದಿಂದ ಕೂಡಿದ ಕಂದು ಬಣ್ಣದ ಹಿಕ್ಕೆಗಳನ್ನು ಕಾಣಬಹುದು.

ಲದ್ದಿ ಹುಳುವಿನ ಹತೋಟಿ ಕ್ರಮಗಳು: ಮುಸುಕಿನ ಜೋಳದ ಜೊತೆ ಮಿಶ್ರ ಬೆಳೆ (ಮುಸುಕಿನ ಜೋಳ ತೊಗರಿ) ಬಿತ್ತುವುದು. ಸಮತೋಲನ ರಾಸಾಯನಿಕಗೊಬ್ಬರ ಬಳಸುವುದು. ಮೊಟ್ಟೆಗಳ ಗುಂಪು ಹಾಗೂ ಮೊದಲ ಹಂತದ ಮರಿಗಳಿರುವ ಎಲೆಗಳನ್ನು ಕಿತ್ತು ನಾಶಮಾಡುವುದು. ಪ್ರತಿ ಎಕರೆಗೆ 30 ಪಕ್ಷಿ ಸೂಚಿಗಳನ್ನು ನೆಡುವುದು. 30 ದಿನಗಳ ಬೆಳೆಯಲ್ಲಿ ಪ್ರತಿ ಎಕರೆಗೆ 15 ರಂತೆ ಮೋಹಕ ಬಲೆಗಳನ್ನು ಅಳವಡಿಸುವುದು. ತತ್ತಿಗಳ ಪರತಂತ್ರ ಜೀವಿಯಾದ ಟ್ರೈಕೊಗ್ರಾಮ ಪ್ರೀಟಿಯೋಸಮ್ ಅನ್ನು ಪ್ರತಿ ಎಕರೆಗೆ 50,000 ದಂತೆ (3 ಟ್ರೈಕೋಕಾರ್ಡ್‍ಗಳನ್ನು) ನಿರ್ಧರಿತ ಅಂತರದಲ್ಲಿ ಬೆಳೆಗಳಲ್ಲಿ ಬಿಡುವುದು. ಮೆಟರೈಜೀಂ ಅನಿಸೋಪ್ಲಿಯೆ (್ಠ1108 ಸಿಎಫ್‍ಯು/ಗ್ರಾಂ) 5 ಗ್ರಾಂ. ಪ್ರತಿ ಲೀಟರ್ ನೀರಿಗೆ ಅಥವಾ ನ್ಯೂಮೋರಿಯಾರಿಲೈ (್ಠ1108 ಸಿಎಫ್‍ಯು/ಗ್ರಾಂ) ಅನ್ನು 3 ಗ್ರಾಂ. ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಗೆ ಸಿಂಪರಣೆ ಮಾಡುವುದು. ಲದ್ದಿ ಹುಳುವಿನಿಂದ ಶೇ.10ರಷ್ಟು (ಪ್ರತಿ 100 ಗಿಡಗಳಿಗೆ 10 ಗಿಡಗಳು) ಹಾನಿಯಾಗಿದ್ದಲ್ಲಿ ಶೇ.5ರ ಬೇವಿನ ಕಷಾಯ (ಅಜಾಡಿರಕ್ಟಿನ್ 1500 ಪಿಪಿಎಂ) 5 ಮಿ. ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಲದ್ದಿ ಹುಳುವಿನಿಂದ ಶೇ.20 ರಷ್ಟು ಹಾನಿಯಾಗಿದ್ದಲ್ಲಿ ಎಮಾಮೆಕ್ಟಿನ್ ಬೆಂಜೋಯೇಟ್ ಶೇ.5 ರಷ್ಟು ಎಸ್. ಜಿ ಅನ್ನು 0.4ಗ್ರಾಂ. ನಂತೆ ಅಥವಾ ಸ್ಪೈನೋಸಾಡ್ 45 ಎಸ್. ಸಿ. ಅನ್ನು 0.3 ಮಿ.ಲೀ. ಅಥವಾ ಥೈಯೋಡಿಕಾರ್ಬ್‍ನ್ನು 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡುವುದು ಹಾಗೂ ಪ್ರತಿ ಸಿಂಪರಣೆಯನ್ನು ಮುಂಜಾನೆ, ಸಾಯಂಕಾಲದಲ್ಲಿ ಕೈಗೊಳ್ಳುವುದು.

ವಿಷ ಪ್ರಾಶನದ ಬಳಕೆ: 10 ಕೆ.ಜಿ. ಗೋಧಿ ತೌಡು ಅಥವಾ ಅಕ್ಕಿತೌಡಿಗೆ 1 ಕೆ.ಜಿ. ಬೆಲ್ಲ ಹಾಗೂ ಸ್ವಲ್ಪ ನೀರನ್ನು ಬೆರೆಸಿಟ್ಟು, ಮಾರನೇ ದಿನ 100 ಗ್ರಾಂಥೈಯೋಡಿಕಾರ್ಬ್ (ಪ್ರತಿ ಕೆ.ಜಿ. ಗೋಧಿತೌಡು ಅಥವಾ ಅಕ್ಕಿತೌಡಿಗೆ 10 ಗ್ರಾಂ. ನಂತೆ)ಕೀಟನಾಶಕ ಮಿಶ್ರಣ ಮಾಡಿ ಬೆಳೆಯ ಸುಳಿಯಲ್ಲಿ ಉದುರಿಸುವುದು. ಕೀಟನಾಶಕವನ್ನು ಸುಳಿಯಲ್ಲಿ ಬೀಳುವಂತೆ ಸಿಂಪರಣೆ ಮಾಡಬೇಕು. ಕೀಟನಾಶಕ ಸಿಂಪರಣೆ ಮಾಡುವಾಗ ಕಡ್ಡಾಯವಾಗಿ ಸುರಕ್ಷತಾ ಕವಚಗಳನ್ನು ಬಳಸಿ ಸಿಂಪರಣಾ ದ್ರಾವಣದೇಹದ ಮೇಲೆ ಬೀಳದಂತೆ ಹಾಗೂ ಉಸಿರಾಟದ ಮೂಲಕ ದೇಹ ಸೇರದಂತೆ ಮುನ್ನೆಚ್ಚರಿಕೆ ವಹಿಸುವುದು.

ಹೆಚ್ಚಿನ ಮಾಹಿತಿಗಾಗಿ ಮತ್ತು ರಿಯಾಯಿತಿ ದರದಲ್ಲಿ ಕೀಟನಾಶಕಗಳಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕೆಂದು ದಾವಣಗೆರೆ ತಾ; ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಧರ್‍ಮೂರ್ತಿ ಡಿ.ಎಂ. ತಿಳಿಸಿದ್ದಾರೆ.

Tags :
ಮೆಕ್ಕೆಜೋಳ ಬೆಳೆಯಲ್ಲಿ ಲದ್ದಿಹುಳು ಕಾಟಹತೋಟಿ ಕ್ರಮಗಳಿಗೆ ಹೀಗೆ ಮಾಡಿ.!
Advertisement
Next Article