For the best experience, open
https://m.bcsuddi.com
on your mobile browser.
Advertisement

ಮೂರು ಸ್ಥಾನಗಳಿಗೆ ಸದ್ಯದಲ್ಲೇ ಬೈ ಇಲೆಕ್ಷನ್ ; ಬಿಜೆಪಿ, ಕಾಂಗ್ರೆಸ್ ಕಸರತ್ತು ಶುರು, ಚನ್ನಪಟ್ಟಣವೇ ಹೈಲೈಟ್, ಡಿಕೆಶಿ ಸೋದರ ಸ್ಪರ್ಧೆ ಸಾಧ್ಯತೆ

02:43 PM Jun 16, 2024 IST | Bcsuddi
ಮೂರು ಸ್ಥಾನಗಳಿಗೆ ಸದ್ಯದಲ್ಲೇ ಬೈ ಇಲೆಕ್ಷನ್   ಬಿಜೆಪಿ  ಕಾಂಗ್ರೆಸ್ ಕಸರತ್ತು ಶುರು  ಚನ್ನಪಟ್ಟಣವೇ ಹೈಲೈಟ್  ಡಿಕೆಶಿ ಸೋದರ ಸ್ಪರ್ಧೆ ಸಾಧ್ಯತೆ
Advertisement

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸದರಾಗಿ, ಶಾಸಕ ಸ್ಥಾನಕ್ಕೆ ರಾಜಿನಾಮೆಯಿತ್ತ ಸ್ಥಾನಗಳಿಗೆ ಸದ್ಯದಲ್ಲೇ ಉಪ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ ಮತ್ತು ಬಳ್ಳಾರಿಯ ತುಕರಾಂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಜೊತೆಗೆ, ವಿಧಾನ ಪರಿಷತ್ ಸದಸ್ಯ ಸ್ಥಾನ ಬಿಟ್ಟು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯಿಂದ ತೆರವಾದ ಪರಿಷತ್ ಸ್ಥಾನಕ್ಕೂ ಚುನಾವಣೆ ನಡೆಯಲಿದೆ.

ಬೊಮ್ಮಾಯಿ ಪ್ರತಿನಿಧಿಸುತ್ತಿದ್ದ ಶಿಗ್ಗಾವಿ, ಕುಮಾರಸ್ವಾಮಿ ಅವರ ಚನ್ನಪಟ್ಟಣ ಮತ್ತು ತುಕಾರಾಂ ಅವರ ಸಂಡೂರು ವಿಧಾನಸಭಾ ಕ್ಷೇತ್ರ ಖಾಲಿಯಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲುಂಡಿರುವ ಡಿ.ಕೆ.ಸುರೇಶ್ ಅವರನ್ನು ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಣಕ್ಕೆ ಇಳಿಸಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟಕ್ಕರ್ ನೀಡಲು ಚಿಂತನೆ ನಡೆದಿದೆ.

ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಮತ್ತೆ ಸ್ಪರ್ಧೆ ಮಾಡುವುದಕ್ಕೆ ಸ್ವತಃ ಡಿ.ಕೆ.ಸುರೇಶ್ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ನಿಟ್ಟಿನಲ್ಲಿ ಡಿಕೆಶಿ ತೆಗೆದುಕೊಳ್ಳುವ ನಿರ್ಣಯವೇ ಅಂತಿಮ. ಇನ್ನು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಸಿ.ಪಿ.ಯೋಗೇಶ್ವರ್ ಅವರು ಸ್ಪರ್ಧಿಸುವ ಬಗ್ಗೆ ಚರ್ಚೆಯಿದೆ. ಜೆಡಿಎಸ್ ಕ್ಷೇತ್ರವಾಗಿರುವುದರಿಂದ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಯೂ ಇದೆ.

Advertisement

ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸಿನ ತುಕರಾಂ ಕುಟುಂಬಕ್ಕೆ ಟಿಕೆಟ್ ನೀಡಲು ಚರ್ಚೆ ನಡೆದಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದು ಚರ್ಚೆ ಹಂತದಲ್ಲಿದೆ.

ಮತ್ತೊಂದೆಡೆ ಶಿಗ್ಗಾಂವ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೆ ಬಿಜೆಪಿ ಟಿಕೆಟ್‌ ಎಂದು ಹೇಳಲಾಗುತ್ತಿದೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ಎಲ್ಲರ ಗಮನ ಸೆಳೆಯುತ್ತಿದೆ.

ವಿಧಾನಸಭೆ ಚುನಾವಣೆ ಜೊತೆಯಲ್ಲೇ ಪರಿಷತ್ತಿಗೂ ಉಪ ಚುನಾವಣೆ ನಡೆಯುತ್ತಾ ಎನ್ನುವ ಕುತೂಹಲ ಇದೆ. ಕೋಟ ಶ್ರೀನಿವಾಸ ಪೂಜಾರಿ ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ಸ್ಥಳೀಯಾಡಳಿತ ಸದಸ್ಯರು ಆಯ್ಕೆ ಮಾಡುತ್ತಾರೆ. ಗ್ರಾಪಂ, ಜಿಪಂ ಚುನಾವಣೆ ನಡೆಯದೆ ಏಳೆಂಟು ವರ್ಷ ಆಗಿದ್ದು ತಾಂತ್ರಿಕವಾಗಿ ಮತದಾನಕ್ಕೆ ಅವಕಾಶ ಇದ್ದರೆ ಜೊತೆ ಜೊತೆಯಲ್ಲೇ ಚುನಾವಣೆ ನಡೆದರೂ ಅಚ್ಚರಿಯಿಲ್ಲ.‌

Author Image

Advertisement