For the best experience, open
https://m.bcsuddi.com
on your mobile browser.
Advertisement

ಮನೆ ಕೆಲಸದಾತನ ಮನೆಯಲ್ಲಿ 30 ಕೋಟಿ ರು. ನಗದು ಪತ್ತೆ

11:26 AM May 07, 2024 IST | Bcsuddi
ಮನೆ ಕೆಲಸದಾತನ ಮನೆಯಲ್ಲಿ 30 ಕೋಟಿ ರು  ನಗದು ಪತ್ತೆ
Advertisement

ರಾಂಚಿ: ಜಾರ್ಖಂಡ್‌ನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ, ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ಬಂಧನವಾದ ಬೆನ್ನಲ್ಲೇ, ಜೆಎಂಎಂ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಸಚಿವ ಆಲಂಗೀರ್‌ ಆಲಂ ಅವರ ಆಪ್ತ ಕಾರ್ಯದರ್ಶಿಯ ಮನೆಯ ಕೆಲಸದವನ ಬಳಿ 30 ಕೋಟಿ ರು. ನಗದು ಪತ್ತೆ ಆಗಿರುವುದು ಸಂಚಲನಕ್ಕೆ ಕಾರಣವಾಗಿದೆ.

ಜಾರ್ಖಂಡ್‌ನ ಅಧಿಕಾರಿಯೊಬ್ಬರ ಮೇಲಿನ ಭ್ರಷ್ಟಾಚಾರದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಸೋಮವಾರ ಇಲ್ಲಿ ಆಲಂ ಆಪ್ತ ಅಧಿಕಾರಿಯ ಮನೆ ಕೆಲಸದವರ ಮನೆ ಮೇಲೆ ನಡೆಸಿದ ದಾಳಿಯಲ್ಲಿ ಭರ್ಜರಿ 25 ಕೋಟಿ ರು. ನಗದು ಪತ್ತೆಯಾಗಿದೆ. ದಾಳಿ ವೇಳೆ ಭಾರೀ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಇತರೆ ಮಹತ್ವದ ದಾಖಲೆಗಳು ಲಭ್ಯವಾಗಿವೆ. ಇದು ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದು ಕಾಂಗ್ರೆಸ್‌ ಹಾಗೂ ಇಂಡಿಯಾ ಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ನಡೆದಿದ್ದೇನು?: ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಜಿ ಮುಖ್ಯ ಎಂಜಿನಿಯರ್‌ ವೀರೇಂದ್ರಕುಮಾರ್ ರಾಮ್‌ ಅವರನ್ನು ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ. ಅಧಿಕಾರಿಗಳು ಬಂಧಿಸಿದ್ದರು. ಅಲ್ಲದೆ ರಾಮ್‌ಗೆ ಸೇರಿದ 39 ಕೋಟಿ ರು. ಮೌಲ್ಯದ ಆಸ್ತಿಯನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದರು. ಅದೇ ಪ್ರಕರಣದ ಭಾಗವಾಗಿ ಇ.ಡಿ. ಅಧಿಕಾರಿಗಳ ತಂಡವು ಸೋಮವಾರ, ಜಾರ್ಖಂಡ್ ಸಚಿವ, ಕಾಂಗ್ರೆಸ್‌ ಮುಖಂಡ ಆಲಂಗೀರ್‌ ಆಲಂರ ಆಪ್ತ ಕಾರ್ಯದರ್ಶಿ ಸಂಜೀವ್‌ ಲಾಲ್‌ ನಂಟಿನ ಹಲವು ಆಸ್ತಿಗಳ ಮೇಲೆ ದಾಳಿ ನಡೆಸಿದೆ.

Advertisement

ಈ ಪೈಕಿ ಸಂಜೀವ್‌ ಲಾಲ್‌ ಮನೆ ಕೆಲಸದವರ ಮನೆಯಲ್ಲಿ 30 ಕೋಟಿ ರು. ನಗದು ಪತ್ತೆಯಾಗಿದೆ. ನೋಟುಗಳನ್ನು ಎಣಿಸಲು 6 ಯಂತ್ರಗಳನ್ನು ಬಳಸಲಾಗಿದ್ದು, ಎಣಿಕೆ 1 ದಿನದಿಂದ ನಡೆಯುತ್ತಿದೆ. ಅದು ಪೂರ್ಣಗೊಂಡಾಗ ನಗದು ಮೌಲ್ಯ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕುರ್‌ ಕ್ಷೇತ್ರದ ಕಾಂಗ್ರೆಸ್‌ ಶಾಸಕರೂ ಆಗಿರುವ ಆಲಂಗೀರ್‌ ಆಲಂ ‘ಯಾಕೆ ದಾಳಿ ನಡೆದಿದೆ ಎಂದು ನನಗೆ ಗೊತ್ತಿಲ್ಲ. ಸಂಜೀವ್‌ ಲಾಲ್‌ ನನಗೆ ಸರ್ಕಾರ ನೀಡಿದ ಅಧಿಕಾರಿ. ಈ ಹಿಂದೆ ಅವರು ಇತರೆ ಹಲವು ಸಚಿವರ ಬಳಿಯೂ ಕಾರ್ಯನಿರ್ವಹಿಸಿದ್ದರು’ ಎಂದಷ್ಟೇ ಹೇಳಿದ್ದಾರೆ.

Author Image

Advertisement