For the best experience, open
https://m.bcsuddi.com
on your mobile browser.
Advertisement

ಮನೆ ಕೆಲಸದವರ ಮೇಲೆ ದೌರ್ಜನ್ಯ - ಉದ್ಯಮಿ ಹಿಂದುಜಾ ಕುಟುಂಬಸ್ಥರಿಗೆ 4.5 ವರ್ಷ ಜೈಲು

01:46 PM Jun 22, 2024 IST | Bcsuddi
ಮನೆ ಕೆಲಸದವರ ಮೇಲೆ ದೌರ್ಜನ್ಯ   ಉದ್ಯಮಿ ಹಿಂದುಜಾ ಕುಟುಂಬಸ್ಥರಿಗೆ 4 5 ವರ್ಷ ಜೈಲು
Advertisement

ಜಿನೀವಾ :‌ ವಿಶ್ವದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ, ಭಾರತ ಮೂಲದ ಉದ್ಯಮಿ ಪ್ರಕಾಶ್‌ ಹಿಂದುಜಾ ಸೇರಿ ಅವರ ಕುಟುಂಬದ ನಾಲ್ವರಿಗೆ ಸ್ವಿಟ್ಜರ್‌ಲ್ಯಾಂಡ್‌ ನ್ಯಾಯಾಲಯವು ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮನೆಯಲ್ಲಿ ಸಾಕಿದ ನಾಯಿಗೆ ವ್ಯಯಿಸುವ ಹಣಕ್ಕಿಂತ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕಡಿಮೆ ಸಂಬಳ ನೀಡುವುದು, ಅಗತ್ಯಕ್ಕಿಂತ ಹೆಚ್ಚು ದುಡಿಸುವುದು ಸೇರಿ ಹಲವು ರೀತಿಯಲ್ಲಿ ದೌರ್ಜನ್ಯ ಎಸಗಿದ ಕಾರಣ ನಾಲ್ವರಿಗೂ ನ್ಯಾಯಾಲಯವು ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹಿಂದುಜಾ ಕುಟುಂಬದ ಉದ್ಯಮಿ ಪ್ರಕಾಶ್‌ ಹಿಂದುಜಾ, ಅವರ ಪತ್ನಿ ಕಮಲ್, ಮಗ ಅಜಯ್ ಹಾಗೂ ಸೊಸೆ ನಮ್ರತಾ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದ, ಹಿಂದುಜಾ ಕುಟುಂಬದ ಮ್ಯಾನೇಜರ್‌ ನಜೀಬ್‌ ಜಿಯಾಜಿಗೆ 18 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನ ಕಾರ್ಮಿಕ ಕಾನೂನು ಉಲ್ಲಂಘನೆ, ಮಾನವ ಕಳ್ಳಸಾಗಣೆ, ಮನೆಗೆಲಸದವರ ಮೇಲೆ ದೌರ್ಜನ್ಯ ಸೇರಿ ಹಲವು ಪ್ರಕರಣಗಳಲ್ಲಿ ನಾಲ್ವರನ್ನೂ ದೋಷಿಗಳು ಎಂದು ಕೋರ್ಟ್‌ ತೀರ್ಪು ನೀಡಿ, ಶಿಕ್ಷೆ ವಿಧಿಸಿದೆ. ಹಿಂದುಜಾ ಕುಟುಂಬವು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿರುವ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆಯೊಬ್ಬಳಿಗೆ ವಾರದಲ್ಲಿ ಏಳು ದಿನಗಳ ಕಾಲ ಹಾಗೂ ಪ್ರತಿದಿನ 18 ಗಂಟೆಕಾಲ ಕೆಲಸ ಮಾಡಿದ್ದಕ್ಕೆ ಕೇವಲ ಏಳು ಸ್ವಿಸ್, ಅಂದರೆ ದಿನಕ್ಕೆ 650 ರೂ. ಸಂಬಳ ನೀಡಿದ್ದಾರೆ. ಆದರೆ, ಅವರು ಮನೆಯಲ್ಲಿ ಸಾಕಿದ ನಾಯಿಗೆ ಮಾತ್ರ ವಾರ್ಷಿಕವಾಗಿ 8,584 ಸ್ವಿಸ್ (ಸುಮಾರು 8 ಲಕ್ಷ ರೂ.) ಖರ್ಚು ಮಾಡುತ್ತಾರೆ. ಹಾಗಾಗಿ ಹಿಂದುಜಾ ಕುಟುಂಬದವರು ತಮ್ಮ ಸೇವಕರಿಗಿಂತ ಸಾಕು ನಾಯಿಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ ಎಂದು ಮಹಿಳೆಯು ಕೋರ್ಟ್‌ ಮೊರೆ ಹೋಗಿದ್ದರು. ಅಷ್ಟೇ ಅಲ್ಲದೇ ಹಿಂದುಜಾ ಕುಟುಂಬದವರು ಮನೆ ಕೆಲಸದ ಮಹಿಳೆಯ ಪಾಸ್‌ಪೋರ್ಟ್ ಕಿತ್ತುಕೊಂಡು ಅನುಮತಿಯಿಲ್ಲದೇ ಮನೆಯಿಂದ ಹೊರಬರದಂತೆ ನಿರ್ಬಂಧ ಹೇರಿದೆ. ಕೆಲಸದವರಿಗೆ ರಜೆ ಕೂಡ ನೀಡುತ್ತಿರಲಿಲ್ಲ. ಅಲ್ಲದೇ ಕರೆನ್ಸಿಯಲ್ಲಿ ಸಂಬಳ ನೀಡುತ್ತಿದ್ದ ಕಾರಣ ಅವರಿಗೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಖರ್ಚು ಮಾಡಲು ಹಣವಿರುತ್ತಿರಲಿಲ್ಲ ಎಂದು ವಕೀಲರು ವಾದ ಮಂಡಿಸಿದ್ದರು. ಈಗ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

Author Image

Advertisement