ಮನೆ ಕಟ್ಟುವವರಿಗೆ ಕಬ್ಬಿಣ- ಸಿಮೆಂಟ್ ದರ ಹೆಚ್ಚಳ.!
ಬೆಂಗಳೂರು: ಮನೆ, ಮಳಿಗೆ, ಕಟ್ಟಡ, ವಾಣಿಜ್ಯ ಸಂಕೀರ್ಣ ನಿರ್ಮಿಸುವವರಿಗೆ ಸಿಮೆಂಟ್ ಸೇರಿ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ನೀರಿನ ಕೊರತೆ, ಕಚ್ಚಾ ವಸ್ತುಗಳ ಅಭಾವ ಎದುರಾಗಿದೆ. ಇದರೊಂದಿಗೆ ಇಟ್ಟಿಗೆ, ಸಿಮೆಂಟ್, ಕಬ್ಬಿಣ, ಎಂ. ಸ್ಯಾಂಡ್ ದರ ಹೆಚ್ಚಳವಾಗಿದೆ. ಕಚ್ಚಾ ವಸ್ತುಗಳು ಸಿಗದ ಕಾರಣ ಸಿಮೆಂಟ್ ಪ್ರತಿ 40 ಕೆಜಿ ಚೀಲಕ್ಕೆ 20 ರೂಪಾಯಿವರೆಗೆ ಹೆಚ್ಚಳವಾಗಿದ್ದು, ಪ್ರತಿ ಟನ್ ಕಬ್ಬಿಣ 4 ರಿಂದ 5 ಸಾವಿರ ರೂ.ವರೆಗೂ ಹೆಚ್ಚಳವಾಗಿದೆ. 4 ಗಜ ಎಂ. ಸ್ಯಾಂಡ್ ಸಾಗಿಸುವ ಪ್ರತಿ ಟ್ರ್ಯಾಕ್ಟರ್ ಗೆ 1500 ರೂಪಾಯಿ ಜಾಸ್ತಿಯಾಗಿ ಮಧ್ಯಮ ವರ್ಗದವರಿಗೆ ಸಂಕಷ್ಟ ಎದುರಾಗಿದೆ.
ಅಗತ್ಯ ನಿರ್ಮಾಣ ಸಾಮಗ್ರಿ ದರ ಹೆಚ್ಚಳ, ನೀರಿನ ಕೊರತೆ ಕಾರಣ ಅನೇಕ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿದೆ. ಗುತ್ತಿಗೆದಾರರು ಮಾಲೀಕರಿಂದ ಹೆಚ್ಚುವರಿ ಮೊತ್ತ ಕೇಳುತ್ತಿದ್ದಾರೆ. ನೀರಿನ ಕೊರತೆ, ಕಚ್ಚಾ ವಸ್ತುಗಳ ಕೊರತೆ, ಬೆಲೆ ಏರಿಕೆಯ ಕಾರಣ ಮನೆ ನಿರ್ಮಾಣಕ್ಕೆ ಪ್ಲಾನ್ ಮಾಡಿಕೊಂಡವರಿಗೆ ಸಂಕಷ್ಟ ಎದುರಾಗಿದ್ದು, ಮನೆಯ ಬಜೆಟ್ ಮತ್ತಷ್ಟು ಏರಿಕೆಯಾಗಲಿದೆ.
ಪ್ರತಿಷ್ಠಿತ ಕಂಪನಿಗಳ ಸಿಮೆಂಟ್ ದರ 40 ಕೆಜಿ ಚೀಲಕ್ಕೆ ಮೊದಲು 335 ರಿಂದ 360 ರೂ. ವರೆಗೆ ಇತ್ತು. ಈಗ 375 ರೂ. ವರೆಗೆ ತಲುಪಿದೆ. ಇವೆಲ್ಲಾ ಕಾರಣಗಳಿಂದ ಮನೆ ನಿರ್ಮಿಸುವವರಿಗೆ ತೊಂದರೆ ಎದುರಾಗಿದೆ.