'ಭಾರತದಾದ್ಯಂತ 7 ದಿನಗಳಲ್ಲಿ ಸಿಎಎ ಜಾರಿ'- ಅಚ್ಚರಿ ಮೂಡಿಸಿದ ಕೇಂದ್ರ ಸಚಿವರ ಹೇಳಿಕೆ
ಕೋಲ್ಕತ್ತಾ: ಮುಂದಿನ ಏಳು ದಿನಗಳಲ್ಲಿ ಭಾರತದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ಶಾಂತನು ಠಾಕೂರ್ ಹೇಳಿದ್ದಾರೆ.
ಕೇಂದ್ರ ಸಚಿವರ ಈ ಹೇಳಿಕೆ ಇದೀಗ ಅಚ್ಚರಿ ಮೂಡಿಸಿದೆ. ಮುಂದಿನ ಏಳು ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಸಿಎಎ ಜಾರಿಗೆ ಬರಲಿದೆ ಎಂದು ನಾನು ಖಾತರಿ ನೀಡಬಲ್ಲೆ ಎಂದು ಬಂಗಾಳದ ದಕ್ಷಿಣ 24 ಪರಗಣಗಳ ಕಾಕ್ ದ್ವಿಪ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಠಾಕೂರ್ ಬಂಗಾಳಿಯಲ್ಲಿ ಹೇಳಿದರು.
ಕಳೆದ ವರ್ಷ ಡಿಸೆಂಬರ್ ನಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಿಎಎಯನ್ನು ಜಾರಿಗೆ ತರಲಿದೆ, ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿ ಅವರು ಹೇಳಿದ್ದರು.
ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾದ ನಂತರ ಮತ್ತು 2019 ರಲ್ಲಿ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದ ನಂತರ,ಸಿಎಎ ಗೆ ಭಾರತದಾದ್ಯಂತ ಬೃಹತ್ ಪ್ರತಿಭಟನೆ ನಡೆಯಿತ್ತು.