ಬ್ರೆಜಿಲ್ ನಲ್ಲಿ ಅಗ್ನಿ ಅವಘಡ- 9 ಮಂದಿ ಬಲಿ, 8 ಮಂದಿಗೆ ಗಾಯ
ಸಾವೊ : ಅಗ್ನಿ ಅವಘಡದಲ್ಲಿ ಒಂಬತ್ತು ಮಂದಿ ಸಜೀವ ದಹನವಾಗಿ ಎಂಟು ಮಂದಿಗೆ ಗಾಯವಾದ ಘಟನೆ ಬ್ರೆಜಿಲ್‌ನ ಉತ್ತರ ರಾಜ್ಯವಾದ ಪಾರಾದಲ್ಲಿ ಭೂರಹಿತ ಕಾರ್ಮಿಕ ಚಳವಳಿ ಎಂಎಸ್‌ಟಿಗೆ ಸೇರಿದ ಶಿಬಿರದಲ್ಲಿ ಡಿ. 11 ರ ರಾತ್ರಿ ಸಂಭವಿಸಿದೆ.
ಪಾರಾಪೇಬಾಸ್ ಪಟ್ಟಣದಲ್ಲಿರುವ ಗ್ರಾಮೀಣ ರೈತರ ಶಿಬಿರದಲ್ಲಿ ಇಂಟರ್ನೆಟ್ ವೈರಿಂಗ್ ಕಾಮಗಾರಿ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಈ ಅವಘಡ ನಡೆದಿದೆ ಎಂದು ಎಂಎಸ್‌ಟಿ ಮಾಹಿತಿ ನೀಡಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಡಿ. 11 ರಂದು ರಾತ್ರಿ 8 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಆಗಿದೆ. ಆಂಟೆನಾವು ಹೈ-ವೋಲ್ಟೇಜ್ ನೆಟ್‌ವರ್ಕ್‌ಗೆ ತಗುಲಿದಾಗ ವಿದ್ಯುತ್ ತಂತಿಗಳಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಇದರ ಪರಿಣಾಮ ಕೆಲವು ಗುಡಿಸಲುಗಳಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ.
ಈ ದುರ್ಘಟನೆಯಲ್ಲಿ ಮೃತಪಟ್ಟ ಒಂಬತ್ತು ಮಂದಿಯ ಪೈಕಿ ಆರು ಮಂದಿ ಶಿಬಿರದಲ್ಲಿ ಇದ್ದವರಾಗಿದ್ದಾರೆ. ಉಳಿದ ಮೂವರು ಇಂಟರ್ನೆಟ್ ಕಂಪನಿಯ ಉದ್ಯೋಗಿಗಳಾಗಿದ್ದಾರೆ. ಇನ್ನು ಗಾಯಗೊಂಡ ಎಂಟು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗಾಗಲೇ ಏಳು ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.