ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆದರಿಕೆ ಹಾಗೂ ಸುಲಿಗೆ ಪ್ರಕರಣ; ನಿರೂಪಕಿ ದಿವ್ಯಾ ವಸಂತಗಾಗಿ ಪೊಲೀಸರ ಹುಡುಕಾಟ..!

06:00 PM Jul 06, 2024 IST | Bcsuddi
Advertisement

ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿ, ‘ಗಿಚ್ಚಿ ಗಿಲಿಗಿಲಿ’ ಶೋ ಸ್ಪರ್ಧಿ ದಿವ್ಯಾ ವಸಂತ ಹೆಸರು ಕೇಳಿಬಂದಿದೆ. ವಾಮಮಾರ್ಗದಲ್ಲಿ ಹಣ ಗಳಿಸಲು ಹೋಗಿ ದಿವ್ಯಾ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಮೊದಲಿಗೆ ಸುದ್ದಿ ವಾಹಿನಿಯ ನಿರೂಪಕಿಯಾಗಿ ಗಮನ ಸೆಳೆದಿದ್ದ ಆಕೆ ಬಳಿಕ ಇನ್‌ಸ್ಟಾಗ್ರಾಂ ರೀಲ್ಸ್, ಯೂಟ್ಯೂಬ್ ವೀಡಿಯೋಗಳಿಂದ ಸದ್ದು ಮಾಡಿದ್ದಳು. ಜೆ. ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ‘ಸ್ಪಾ’ವೊಂದರ ವ್ಯವಸ್ಥಾಪಕನನ್ನು ಬೆದರಿಸಿ ಹಣ ಸುಲಿಗೆ ಯತ್ನಿಸಿದ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ರಾಜ್‌ನ್ಯೂಸ್ ಸುದ್ದಿವಾಹಿನಿ ಸಿಇಓ ವೆಂಕಟೇಶ್ ಹಾಗೂ ದಿವ್ಯಾ ವಸಂತ ಸಹೋದರ ಸಂದೇಶ್ ಬಂಧನವಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಸದ್ಯ ದಿವ್ಯಾ ವಸಂತ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವೆಂಕಟೇಶ್ ಹಾಗೂ ದಿವ್ಯಾ ಸೇರಿ ‘ಸ್ಪೈ ರೀಸರ್ಚ್ ಟೀಂ’ ಹೆಸರಿನ ವಾಟ್ಸಪ್‌ ಗ್ರೂಪ್ ಮಾಡಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ವರದಿಯಾಗಿದೆ. ತಮ್ಮ ಡೀಲ್, ಪ್ಲ್ಯಾನ್‌ಗಳ ಬಗ್ಗೆ ಇದೇ ಗ್ರೂಪ್‌ನಲ್ಲಿ ಆರೋಪಿಗಳು ಚರ್ಚಿಸುತ್ತಿದ್ದರು ಎನ್ನಲಾಗಿದೆ. ಖಾಸಗಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿಕೊಂಡಿದ್ದ ದಿವ್ಯಾ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದಳು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಳು. ರ್ಯಾಪ್ ಸಾಂಗ್ಸ್ ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಳು. ಸುದ್ದಿ ವಾಹಿನಿಯಲ್ಲಿ 15ರಿಂದ 20 ಸಾವಿರ ಸಂಬಳ ಸಿಗುತ್ತಿತ್ತು. ರಿಯಾಲಿಟಿ ಶೋನಿಂದ ವಾರಕ್ಕೆ ಐದಾರು ಸಾವಿರ ಸಿಗುತ್ತಿತ್ತು. ಮಧ್ಯಮವರ್ಗದ ಕುಟುಂಬದಿಂದ ಬಂದ ದಿವ್ಯಾ ಶೋಕಿಗೆ ಬಿದ್ದು ಐಷಾರಾಮಿ ಜೀವನಕ್ಕಾಗಿ ಸುಲಿಗೆಕೋರರ ಜೊತೆ ಕೈ ಜೋಡಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ತನ್ನ ಯೂಟ್ಯೂಬ್ ಚಾನಲ್‌ಗೆ ನಿರೂಪಕಿಯಾಗಿ ದಿವ್ಯಾಳನ್ನು ವೆಂಕಟೇಶ್ ಪರಿಚಯಿಸಿಕೊಂಡಿದ್ದ. ಅದೇ ಸಲುಗೆಯಿಂದ ಇಬ್ಬರು ಅಮಾಯಕ ಸುಲಿಗೆ ಮಾಡಲು ಆರಂಭಿಸಿದ್ದರು. ಇಂದಿರಾನಗರದ ಶ್ರೀ ಸ್ಪಾ ಆ್ಯಂಡ್ ಬ್ಯೂಟಿ ಪಾರ್ಲರ್‌ಗೆ ವೆಂಕಟೇಶ್‌ ಹಾಗೂ ದಿವ್ಯಾ ತಂಡ ಈಶಾನ್ಯ ರಾಜ್ಯದ ಯುವತಿಯನ್ನು ಕೆಲಸಕ್ಕೆ ಸೇರಿಸಿದ್ದರು. ನಂತರ ಗ್ರಾಹಕನ ಸೋಗಿನಲ್ಲಿ ಸ್ಪಾಗೆ ದಿವ್ಯಾ ಸೋದರ ಸಂದೇಶ್ ಹೋಗಿದ್ದ. ತನ್ನದೇ ಗ್ಯಾಂಗ್‌ ಯುವತಿ ಬಳಿ ಮಸಾಜ್‌ಗೆ ಬುಕ್‌ ಮಾಡಿಕೊಂಡಿದ್ದ. ಆಕೆಯ ಜೊತೆ ಸಲುಗೆಯಿಂದ ವಿಡಿಯೋವನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆಹಿಡಿದುಕೊಂಡಿದ್ದ. ನಿಮ್ಮ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಈಗಾಗಲೇ ಸೆರೆಹಿಡಿದಿದ್ದ ವೀಡಿಯೋ ತೋರಿಸಿ ಸ್ಪಾ ವ್ಯವಸ್ಥಾಪಕರನ್ನು ಬೆದರಿಸಿದ್ದರು. 15 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ತಂಡ ಬಳಿಕ 8 ಲಕ್ಷ ರೂ.ಗೆ ಡೀಲ್ ಕುದುರಿಸಲು ಯತ್ನಿಸಿತ್ತು. ಆದರೆ ಸ್ಪಾ ವ್ಯವಸ್ಥಾಪಕ ಜೆ.ಬಿ.ನಗರ ಠಾಣೆ ಮೆಟ್ಟಿಲೇರಿದ್ದರು. ತನಿಖೆಗಿಳಿದ ಪೊಲೀಸರು ವೆಂಕಟೇಶ್‌ ಹಾಗೂ ಸಂದೇಶ್‌ನನ್ನು ಬಂಧಿಸಿ ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಲಗ್ಗೆರೆಯಲ್ಲಿರುವ ದಿವ್ಯಾ ವಸಂತ ಮನೆ ಮೇಲೆ ದಾಳಿ ನಡೆಸಿ ಕ್ಯಾಮರಾ, ಲ್ಯಾಪ್‌ಟಾಪ್ ಸೇರಿ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

Advertisement
Next Article