ಬಿಹಾರದಿಂದ ಉತ್ತರ ಪ್ರದೇಶಕ್ಕೆ ಕಳ್ಳಸಾಗಾಣಿಕೆಯಾಗುತ್ತಿದ್ದ 95 ಮಕ್ಕಳ ರಕ್ಷಣೆ
ಲಕ್ನೋ: ಬಿಹಾರದಿಂದ ಉತ್ತರ ಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 95 ಮಕ್ಕಳನ್ನು ಅಯೋಧ್ಯೆಯಲ್ಲಿ ಮಕ್ಕಳ ಆಯೋಗದ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅಯೋಧ್ಯೆಯ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸರ್ವೇಶ್ ಅವಸ್ತಿ, 'ಉತ್ತರ ಪ್ರದೇಶದ ಮಕ್ಕಳ ಆಯೋಗದ ಸದಸ್ಯೆ ಸುಚಿತ್ರಾ ಚತುರ್ವೇದಿ ಅವರು ನೀಡಿದ ಮಾಹಿತಿ ಆಧರಿಸಿ ಮಕ್ಕಳನ್ನು ರಕ್ಷಣೆ ಮಾಡಲಾಯಿತು. ಬಿಹಾರದಿಂದ 4-12 ವರ್ಷದೊಳಗಿನ ಮಕ್ಕಳನ್ನು ಅಕ್ರಮವಾಗಿ ಸಹರಾನ್‌ಪುರಕ್ಕೆ ಸಾಗಿಸಲಾಗುತ್ತಿದ್ದು, ಸದ್ಯ ಅವರನ್ನು ಗೋರಖ್‌ಪುರದಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.
ಕೂಡಲೇ ನಾವು ಕಾರ್ಯಪ್ರವೃತ್ತರಾಗಿ ಅಯೋಧ್ಯೆಯಲ್ಲಿ ಮಕ್ಕಳನ್ನು ರಕ್ಷಣೆ ಮಾಡಿದ್ದೇವೆ. ಜತೆಗೆ ಮಕ್ಕಳಿಗೆ ಆಹಾರ ಮತ್ತು ವೈದ್ಯಕೀಯ ನೆರವು ಒದಗಿಸಲಾಗಿದೆ’ ಎಂದು ತಿಳಿಸಿದ್ದಾರೆ. ಮಕ್ಕಳನ್ನು ಕರೆತಂದವರಿಗೆ ಪೋಷಕರಿಂದ ಯಾವುದೇ ಒಪ್ಪಿಗೆ ಪತ್ರವಿಲ್ಲ. ಮಕ್ಕಳನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆಂದು ತಿಳಿದಿಲ್ಲ. ಮಕ್ಕಳ ಪೋಷಕರನ್ನು ಸಂಪರ್ಕಿಸಲಾಗುತ್ತಿದೆ. ಪೋಷಕರನ್ನು ಸಂಪರ್ಕಿಸಿ ಅವರನ್ನು ಒಪ್ಪಿಸಲಾಗುವುದು’ ಎಂದು ಸಿಡಬ್ಲ್ಯೂಸಿ ಸದಸ್ಯರು ತಿಳಿಸಿದ್ದಾರೆ.