ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಿಜೆಪಿ ಮತ್ತು ಜೆಡಿಎಸ್ ಏನಾದರೂ ಟೀಕೆ ಮಾಡಲಿ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಿಯೇ ಸಿದ್ಧ

12:18 PM Jul 20, 2024 IST | Bcsuddi
Advertisement

ಚನ್ನಪಟ್ಟಣ : ನಾವು ಮೂಲತಃ ಬೆಂಗಳೂರಿನವರು. ಬೆಂಗಳೂರು ಎಂಬುದು ನಮ್ಮ ಗುರುತು ಹಾಗೂ ನಮ್ಮ ಸ್ವಾಭಿಮಾನ. ಇದನ್ನು ನಾವು ಕಳೆದುಕೊಳ್ಳಬಾರದು. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ಏನಾದರೂ ಟೀಕೆ ಮಾಡಲಿ ಈ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿಯೇ ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

Advertisement

ಚನ್ನಪಟ್ಟಣದಲ್ಲಿ  ನಡೆದ ಸರ್ಕಾರಿ ನೌಕರರ ಸಂಘದ ಸಮ್ಮೇಳನದಲ್ಲಿ ಮಾತನಾಡಿದ ಶಿವಕುಮಾರ್ “ಜಿಲ್ಲೆಯ ಹೆಸರು ಮಾತ್ರ ಬದಲಾಗುತ್ತದೆ ಹೊರತು ರಾಮನಗರದ ಹೆಸರು, ಆಡಳಿತ ಕೇಂದ್ರ ಹಾಗೆಯೇ ಉಳಿಯಲಿದೆ. ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ, ಹಾರೋಹಳ್ಳಿ ಸೇರಿಸಿ ಬೆಂಗಳೂರು ದಕ್ಷಿಣ ಮಾಡಲಾಗುತ್ತದೆ. ನಾನು ಜಿಲ್ಲಾ ಪರಿಷತ್ ಸದಸ್ಯನಾಗಿದ್ದಾಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಷತ್ ಎಂದು ಇತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿತ್ತು. ಆಡಳಿತಾತ್ಮಕವಾಗಿ ಪ್ರತ್ಯೇಕ ಜಿಲ್ಲೆ ಮಾಡುವಾಗ ಬೆಂಗಳೂರು ಹೆಸರನ್ನು ಕಳೆದುಕೊಳ್ಳುವುದು ಬೇಡ ಎಂದು ಸಲಹೆ ನೀಡಿದ್ದೆ. ನನ್ನನ್ನು ದೊಡ್ಡಾಲಹಳ್ಳಿ ಕೆಂಪೇಗೌಡನ ಮಗ ಶಿವಕುಮಾರ್ ಎಂದು ಗುರುತಿಸಿಕೊಳ್ಳುತ್ತೇವೆ. ದೇವೇಗೌಡರು ಕೂಡ ತಮ್ಮ ಹೆಸರಿನಲ್ಲಿ ತಮ್ಮ ಊರು, ತಂದೆಯ ಹೆಸರನ್ನು ಇಟ್ಟುಕೊಂಡಿದ್ದಾರೆ. ಎಲ್ಲರೂ ಕೂಡ ಈ ರೀತಿ ತಮ್ಮ ಮೂಲ ಗುರುತನ್ನು ಉಳಿಸಿಕೊಳ್ಳುತ್ತಾರೆ. ನಾವು ಯಾಕೆ ನಮ್ಮ ಬೆಂಗಳೂರು ಗುರುತನ್ನು ಬಿಟ್ಟುಕೊಡಬೇಕು? ಕನಕಪುರ ಲೋಕಸಭೆ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಎಂದು ಮರು ನಾಮಕರಣ ಮಾಡಿದ್ದು ಏಕೆ? ಬೆಂಗಳೂರು ಎಂಬುದು ಒಂದು ಬ್ರ್ಯಾಂಡ್. ಅದು ನಮ್ಮ ಹೆಗ್ಗುರುತು. ಅದನ್ನು ನಾವು ಏಕೆ ಕಳೆದುಕೊಳ್ಳಬೇಕು? ನಮ್ಮ ಈ ಗುರುತನ್ನು ಉಳಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದು, ನಾನು ಇದನ್ನು ಮಾಡೇ ಮಾಡುತ್ತೇನೆ.

2003ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬೆಂಗಳೂರಿಗೆ ಬಂದು, ‘ಇಷ್ಟು ದಿನಗಳ ಕಾಲ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದರು. ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದ್ದರು.

ಬಿಜೆಪಿ ಹಾಗೂ ಜೆಡಿಎಸ್ ನವರು ಏನಾದರೂ ಟ್ವೀಟ್ ಮಾಡಲಿ, ಟೀಕೆ ಮಾಡಲಿ, ನಮ್ಮ ಸ್ವಾಭಿಮಾನವನ್ನು ನಾವು ಬಿಡುವ ಪ್ರಶ್ನೆಯೇ ಇಲ್ಲ. ಜನ ನಮ್ಮ ನಿರ್ಧಾರದಿಂದ ಸಂತೋಷವಾಗಿದ್ದಾರೆ.

ನಾನು, ನಮ್ಮ ನಾಯಕರು ಈ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕಾರಣ ಮಾಡಲು ಮುಂದಾದರೆ ರಿಯಲ್ ಎಸ್ಟೇಟ್ ಗಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ನಾನು ಇಲ್ಲಿ ಬಂದು ರಿಯಲ್ ಎಸ್ಟೇಟ್ ಮಾಡಬೇಕಾಗಿಲ್ಲ. ನನ್ನ ಕ್ಷೇತ್ರದಲ್ಲಿ ಅನೇಕ ಆಸ್ತಿಯನ್ನು ಶಾಲೆಗಳಿಗೆ ದಾನ ಮಾಡಿದ್ದೇನೆ. ನಾನು ಬಡವ ಎಂದು ಹೇಳುವುದಿಲ್ಲ. ಇದು ನನ್ನ ನೆಲ. ನನ್ನನ್ನು ಬೆಳೆಸಿದ ನೆಲ. ಇದನ್ನು ಅಭಿವೃದ್ಧಿ ಮಾಡಬೇಕಾಗಿರುವುದು ನನ್ನ ಜವಾಬ್ದಾರಿ. ಈ ಜನರ ಜೇಬಿಗೆ ಹಣ ಹಾಕಲು ಸಾಧ್ಯವಾಗುವುದಿಲ್ಲ. ಆದರೆ ಅವರ ಆಸ್ತಿ ಮೌಲ್ಯವನ್ನು ಹೆಚ್ಚಿಸಿ ಅವರಿಗೆ ಶಕ್ತಿ ತುಂಬಬೇಕು. ಅದು ನನ್ನ ಜವಾಬ್ದಾರಿ. ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಮಾಡುವ ಮೊದಲು ಅಲ್ಲಿ ಎಕರೆ ಮೌಲ್ಯ 6 ಲಕ್ಷ ಇತ್ತು. ಈಗ ಅದು 10 ಕೋಟಿಗೂ ಹೆಚ್ಚಾಗಿದೆ. ಅಲ್ಲಿನ ಆಸ್ತಿ ಮೌಲ್ಯ ಹೆಚ್ಚಾಗಿದೆ.

 

Advertisement
Next Article