For the best experience, open
https://m.bcsuddi.com
on your mobile browser.
Advertisement

ಬಿಜೆಪಿ ಪಾದಯಾತ್ರೆಗೆ ಬೆಂಗಳೂರಿನಲ್ಲಿ ಅವಕಾಶ ಇಲ್ಲ : ಪೊಲೀಸ್ ಆಯುಕ್ತ ದಯಾನಂದ್

10:01 AM Aug 02, 2024 IST | BC Suddi
ಬಿಜೆಪಿ ಪಾದಯಾತ್ರೆಗೆ ಬೆಂಗಳೂರಿನಲ್ಲಿ ಅವಕಾಶ ಇಲ್ಲ   ಪೊಲೀಸ್ ಆಯುಕ್ತ ದಯಾನಂದ್
Advertisement

ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಶನಿವಾರದಿಂದ ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿವೆ. ಆದರೆ, ತಮಗೆ ಈ ಬಗ್ಗೆ ಮಾಹಿತಿ ಇಲ್ಲ. ಯಾರೂ ವಿನಂತಿ ಮಾಡಿಲ್ಲ. ನಗರದಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಬೆಂಗಳೂರು ನಗರ ಪೊಲಿಸ್ ಆಯುಕ್ತ ಬಿ. ದಯಾನಂದ್ ಸ್ಪಷ್ಟಪಡಿಸಿದರು.

ಪಾದಯಾತ್ರೆ ಎಲ್ಲಿಂದ, ಯಾವ ರೀತಿ ಶುರು ಮಾಡುತ್ತಾರೆ ಎಂಬುದು ಇನ್ನೂ ಗೊತ್ತಿಲ್ಲ. ನಗರದಲ್ಲಿ ಪ್ರತಿಭಟನೆಗೆ, ರ‍್ಯಾಲಿಗೆ, ಪಾದಯಾತ್ರೆಗೆ ಅನುಮತಿ ಇಲ್ಲ. ಹೈಕೋರ್ಟ್ ಆದೇಶದ ಅನ್ವಯ ಅನುಮತಿ ಇಲ್ಲ. ಆದರೂ ಪೂರಕವಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ನನ್ನ ಮಟ್ಟದಲ್ಲಿ ಯಾರೂ ಬಂದು ಇದುವರೆಗೆ ಅನುಮತಿ ಕೇಳಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ಜೆಡಿಎಸ್ ಪಾದಯಾತ್ರೆಗೆ ನಾವು ಅನುಮತಿ ನೀಡುವುದಿಲ್ಲ. ಅವರು ಮಾಡುವುದಿದ್ದರೆ ಮಾಡಿಕೊಳ್ಳಲಿ, ಅದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಅಧಿಕೃತವಾಗಿ ಪೊಲೀಸ್ ಇಲಾಖೆಯಿಂದ ನಾವು ಅನುಮತಿ ನೀಡುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಕೆಲವೇ ದಿನಗಳ ಹಿಂದೆ ಕಡ್ಡಿಮುರಿದಂತೆ ಹೇಳಿದ್ದರು. ಇದೀಗ ನಗರ ಪೊಲೀಸ್ ಆಯುಕ್ತರೂ ಅದೇ ರೀತಿ ಹೇಳಿಕೆ ನೀಡಿದ್ದಾರೆ.

Advertisement

ಪಾದಯಾತ್ರೆ ವಿಚಾರವಾಗಿ ಬಿಜೆಪಿ ಮತ್ತು ಮಿತ್ರಪಕ್ಷ ಜೆಡಿಎಸ್ ಮಧ್ಯೆ ಗೊಂದಲ ಏರ್ಪಟ್ಟಿತ್ತು. ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದರು. ಅಲ್ಲದೆ, ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲ ಎಂದೂ ಹೇಳಿದ್ದರು. ನಂತರ ಬಿಜೆಪಿ ಹೈಕಮಾಂಡ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.

ಶನಿವಾರ ಮೈಸೂರಿಗೆ ಪಾದಯಾತ್ರೆ ಆರಂಭವಾಗಲಿದೆ. ಸಣ್ಣಪುಟ್ಟ ಗೊಂದಲ ಇದ್ದರೂ ಪಾದಯಾತ್ರೆ ನಡೆಯಲಿದೆ. ಶನಿವಾರ ಬೆಳಗ್ಗೆ 8.30ಕ್ಕೆ‌ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಆರಂಭಗೊಳ್ಳಲಿದೆ. ಕುಮಾರಸ್ವಾಮಿಯೇ ಪಾದಯಾತ್ರೆಗೆ ಚಾಲನೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗುರುವಾರ ತಿಳಿಸಿದದ್ದಾರೆ.

Author Image

Advertisement