For the best experience, open
https://m.bcsuddi.com
on your mobile browser.
Advertisement

'ಬಿಜೆಪಿ- ಜೆಡಿಎಸ್ ಬೇರೆ ಅಲ್ಲ, ನಾವೆಲ್ಲ ಒಂದೇ ತಾಯಿ ಮಕ್ಕಳಂತೆ' -ಯಡಿಯೂರಪ್ಪ

06:11 PM Mar 29, 2024 IST | Bcsuddi
 ಬಿಜೆಪಿ  ಜೆಡಿಎಸ್ ಬೇರೆ ಅಲ್ಲ  ನಾವೆಲ್ಲ ಒಂದೇ ತಾಯಿ ಮಕ್ಕಳಂತೆ   ಯಡಿಯೂರಪ್ಪ
Advertisement

ಬೆಂಗಳೂರು: ಈ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಬಿಜೆಪಿ ಮತ್ತು ಜೆಡಿಎಸ್ ಆಹ್ವಾನಿತ ಪ್ರಮುಖರ ಉಪಸ್ಥಿತಿಯಲ್ಲಿ ನಗರದ ಖಾಸಗಿ ಹೋಟೆಲ್‍ನಲ್ಲಿ ಇಂದು ನಡೆದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಸರಕಾರದ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6 ಸಾವಿರ ಜೊತೆಗೆ ನಾನು ಮುಖ್ಯಮಂತ್ರಿ ಆಗಿದ್ದಾಗ 4 ಸಾವಿರ ಹೆಚ್ಚುವರಿಯಾಗಿ ಕೊಡುತ್ತಿದ್ದೆ. ಆ 4 ಸಾವಿರ ನಿಂತು ಹೋಗಿದೆ ಎಂದು ಟೀಕಿಸಿದರು.

ಸರಕಾರ ದಿವಾಳಿ ಆಗಿರುವುದಕ್ಕೆ ಬೇರೆ ಉದಾಹರಣೆ ಬೇಕೇ ಎಂದು ಪ್ರಶ್ನಿಸಿದರು.ಬಿಜೆಪಿ- ಜೆಡಿಎಸ್ ಬೇರೆ ಅಲ್ಲ. ನಾವೆಲ್ಲ ಒಂದೇ ತಾಯಿ ಮಕ್ಕಳಂತೆ. ಬಿಜೆಪಿ- ಜೆಡಿಎಸ್ ಅಭ್ಯರ್ಥಿ ಯಾರೇ ಇರಲಿ. ಅವರನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಪಣ ತೊಡಿ. ಆಗ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ನಮ್ಮ ಪ್ರಯತ್ನವನ್ನು ತಡೆಯಲು ಯಾರಿಂದಲೂ ಅಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ದೇಶ- ವಿದೇಶಗಳಲ್ಲಿ ನಿರಂತರ ಪ್ರವಾಸ ಮಾಡುತ್ತಿರುವ, ಒಂದು ದಿನ ರಜೆ ಪಡೆಯದೆ ದೇಶದ ಅಭಿವೃದ್ಧಿಗೆ ಶ್ರಮಿಸುವ ಪ್ರಧಾನಿ ನರೇಂದ್ರ ಮೋದಿ ಜೀ ಮತ್ತು ಈ ಹರೆಯದಲ್ಲೂ ಅತ್ಯಂತ ಉತ್ಸಾಹದಿಂದ ರಾಜ್ಯ ಪ್ರವಾಸ ಮಾಡಲು ಸಿದ್ಧರಾಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದರಲ್ಲದೆ, ಕಾಯಾ, ವಾಚಾ, ಮನಸಾ ಕೆಲಸ ಮಾಡಿ 28ಕ್ಕೆ 28 ಕ್ಷೇತ್ರ ಗೆಲ್ಲೋಣ ಎಂದು ಮನವಿ ಮಾಡಿದರು.

ಸಮನ್ವಯತೆಯಿಂದ ಕೆಲಸ ಮಾಡೋಣ- ದೇವೇಗೌಡ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಮಾತನಾಡಿ, ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ನಮ್ಮೆದುರು ಇರುವ ಕಾಲಾವಧಿ ಅತ್ಯಂತ ಕಡಿಮೆ ಇದೆ. ನಾವು ಹಳೆಯದೆಲ್ಲವನ್ನು ಮರೆತು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ನಮ್ಮ ವಿರೋಧಿಗಳು ಬಲಿಷ್ಠರಿದ್ದಾರೆ. ನಾವು ಭೂತಕಾಲದ ಎಲ್ಲವನ್ನು ಮರೆಯದೆ ಇದ್ದರೆ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗದು ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ಪಕ್ಷವು ಹಣಬಲದಿಂದ ಗೆಲ್ಲಲು ಮುಂದಾಗಿದೆ. ಬೇರೆ ರಾಜ್ಯಗಳಿಗೂ ಅದು ಚುನಾವಣೆಗೆ ಹಣದ ನೆರವು ನೀಡುತ್ತಿದೆ ಎಂದು ಗಮನ ಸೆಳೆದ ಅವರು, ಇವೆಲ್ಲವನ್ನೂ ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು. ಭಿನ್ನಮತ ದೂರ ಮಾಡಲು ಯಾವುದೇ ನಾಯಕರ ಮನೆಗೆ ಹೋಗಲು ಸಿದ್ಧ ಎಂದು ನುಡಿದರು.

ಎರಡೂ ಪಕ್ಷದವರು ಜೊತೆಯಾಗಿ ಕೆಲಸ ಮಾಡಿದರೆ ಎಲ್ಲ ಕ್ಷೇತ್ರಗಳಲ್ಲಿ ನಮಗೆ ಗೆಲ್ಲುವ ಸಾಮರ್ಥ್ಯ ಇದೆ ಎಂದ ಅವರು, ಮೋದಿಯವರು ಮತ್ತು ತಮ್ಮ ನಡುವಿನ ಆತ್ಮೀಯ ಕ್ಷಣಗಳನ್ನು ನೆನಪಿಸಿಕೊಂಡರು.

ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಲೋಕಸಭಾ ಚುನಾವಣೆಯ ರಾಜ್ಯ ಉಸ್ತುವಾರಿ ರಾಧಾಮೋಹನ್‍ದಾಸ್ ಅಗರವಾಲ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯದ ಮಾಜಿ ಸಚಿವ ಜಿ.ಟಿ. ದೇವೇಗೌಡ, ಎರಡೂ ಪಕ್ಷಗಳ ಆಹ್ವಾನಿತ ಮುಖಂಡರು ಭಾಗವಹಿಸಿದ್ದರು.

Author Image

Advertisement