ಬಜೆಟ್ 2024: ಮಿತ್ರ ಪಕ್ಷಗಳಿಗೆ ಕೊಡುಗೆ - ಬಿಹಾರ, ಆಂಧ್ರಪ್ರದೇಶಕ್ಕೆ ನಿರ್ಮಲಾ ಬಂಪರ್ ಘೋಷಣೆ
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು ಎನ್‌ಡಿಎ ಸರ್ಕಾರದ ಅತಿ ಪ್ರಮುಖ ಆಧಾರ ಸ್ತಂಭಗಳಾಗಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾ ದಳ ಸಂಯುಕ್ತ (ಜೆಡಿಯು) ಪಕ್ಷಗಳ ಆಡಳಿತವಿರುವ ಆಂಧ್ರ ಪ್ರದೇಶ ಮತ್ತು ಬಿಹಾರಕ್ಕೆ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ.
ಆಂಧ್ರಕ್ಕೆ ವಿಶೇಷ ನೆರವು ಘೋಷಣೆ ಮಾಡಲಾಗಿದ್ದು ಈ ವರ್ಷ 15 ಸಾವಿರ ಕೋಟಿ ರುಪಾಯಿ ವಿಶೇಷ ಅನುದಾನವನ್ನು ಆಂಧ್ರ ಮರು ನಿರ್ಮಾಣಕ್ಕೆ ನೀಡಲಾಗಿದೆ. ಇನ್ನು ವಿಶಾಖ ಪಟ್ಟಣಂ-ಚೆನ್ನೈ ಕೈಗಾರಿಕಾ ಕಾರಿಡಾರ್ ಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಜೆಡಿಯ ನಾಯಕ ನಿತೀಶ್ ಕುಮಾರ್ ಆಡಳಿತವಿರುವ ಬಿಹಾರ ಸರ್ಕಾರದ ಬೇಡಿಕೆಯಾದ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳಿಂದ ಬಾಹ್ಯ ನೆರವು, ಬಿಹಾರಕ್ಕೆ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ಕ್ರೀಡಾ ಸೌಕರ್ಯಗಳನ್ನು ಒದಗಿಸಲಾಗುವುದು. ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ 26 ಸಾವಿರ ಕೋಟಿ ರೂ ಹಂಚಿಕೆ ಮಾಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರ ತನ್ನ ಮೊದಲ ಪೂರ್ಣ ಬಜೆಟ್ ಮಂಡನೆಯಾಗುತ್ತಿದ್ದು, ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಸತತ 7ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ.