For the best experience, open
https://m.bcsuddi.com
on your mobile browser.
Advertisement

ಪ್ಯಾಲೆಸ್ತೀನ್ ಪರ ಕಾರ್ಯಕ್ರಮಕ್ಕೆ ಖಾಕಿ ಪಡೆ ತಡೆ - ಮಧ್ಯಪ್ರವೇಶಿಸಿದ ಸಿಎಂ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ

03:53 PM Dec 02, 2023 IST | Bcsuddi
ಪ್ಯಾಲೆಸ್ತೀನ್ ಪರ ಕಾರ್ಯಕ್ರಮಕ್ಕೆ ಖಾಕಿ ಪಡೆ ತಡೆ   ಮಧ್ಯಪ್ರವೇಶಿಸಿದ ಸಿಎಂ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ
Advertisement

ಬೆಂಗಳೂರು : ಬೆಂಗಳೂರಿನ ರಂಗಶಂಕರದಲ್ಲಿ ಆಯೋಜಿಸಿದ್ದ ಪ್ಯಾಲೆಸ್ತೀನ್ ಪರ ಕಾರ್ಯಕ್ರಮಕ್ಕೆ ಬೆಂಗಳೂರು ಪೊಲೀಸರು ಅವಕಾಶ ನಿರಾಕರಣೆ ಮಾಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮಧ್ಯ ಪ್ರವೇಶ ಮಾಡಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ವಿಷಯ ತಿಳಿದ ತಕ್ಷಣ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ, ಸಂವಿಧಾನದ ಆಶಯಗಳಡಿ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸುವ ಅಥವಾ ತಡೆಯುವ ಕೆಲಸ ಮಾಡಲ್ಲ. ಕೆಳ ಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳುವಳಿಕೆಯಿಂದ‌ ಅನಾವಶ್ಯಕ ಗೊಂದಲ ಸೃಷ್ಟಿಯಾಗಿದೆ. ಕಥೆ, ಕಾವ್ಯ, ನಾಟಕ, ಸಂಗೀತ ಸೇರಿದಂತೆ ಸೃಜನಶೀಲ ಅಭಿವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ತಡೆಯುವುದಿಲ್ಲ. ಈ ಬಗ್ಗೆ ಗೊಂದಲ‌ ಉಂಟಾಗದಂತೆ ನೋಡಿಕೊಳ್ಳಲು ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ನಾವು ಸಂವಿಧಾನದ ಮೂಲಸ್ಪೂರ್ತಿಗೆ ವಿರುದ್ದವಾಗದಂತೆ ನಡೆಯುವ ಎಲ್ಲಾ ಅಭಿವ್ಯಕ್ತಿಗಳ ಪರವಾಗಿದ್ದೇವೆ. ನಾಡ ಬಾಂಧವರು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಆತಂಕಿತರಾಗಬಾರದು ಎಂದು ಹೇಳಿದ್ದಾರೆ. ಕಳೆದ ನವೆಂಬರ್ 29ರ ಸಂಜೆ 5:30ಕ್ಕೆ ಕಾವ್ಯಗೋಷ್ಠಿ, ಕಿರು ನಾಟಕ ಸೇರಿದಂತೆ ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡವನ್ನು ಖಂಡಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಖ್ಯಾತ ಕಲಾವಿದರಾದ ಎಂ.ಡಿ ಪಲ್ಲವಿ, ಶ್ವೇತಾಂಶು ಬೋರ, ರಮಣೀಕ್ ಸಿಂಗ್ ನೇತೃತ್ವ ವಹಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಪೊಲೀಸರು ಅವಕಾಶ ನಿರಾಕರಿಸಿದ್ದರು. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟರ್‌ ಹಂಚಿಕೊಂಡಿದ್ದ ಗಾಯಕಿ ಎಂ.ಡಿ ಪಲ್ಲವಿ, ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ಪೋಸ್ಟ್ ಮಾಡಿದ್ದರು. ಹೀಗಾಗಿ, ಕಾಂಗ್ರೆಸ್‌ ಸರ್ಕಾರ ಇರುವಾಗಲೇ ಇಂತಹದೊಂದು ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಿದ್ದನ್ನು ಖಂಡಿಸಿ ಪ್ರಗತಿಪರರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

Author Image

Advertisement