For the best experience, open
https://m.bcsuddi.com
on your mobile browser.
Advertisement

ಪಾಕ್ ಪರ ಘೋಷಣೆ ಪ್ರಕರಣ: ಆರೋಪಿಗಳಿಗೆ ಜಾಮೀನು

11:56 AM Mar 15, 2024 IST | Bcsuddi
ಪಾಕ್ ಪರ ಘೋಷಣೆ ಪ್ರಕರಣ  ಆರೋಪಿಗಳಿಗೆ ಜಾಮೀನು
Advertisement
ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂಬ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಗಂಭೀರ ಆರೋಪ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದವರು ಎರಡು ವಾರದಲ್ಲಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ.ನಗರದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್ (ಎಸಿಎಂಎಂ) ಪ್ರಕರಣದಲ್ಲಿ ಬಂಧಿತ ಮೂವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಈ ಕುರಿತಂತೆ ಬಂಧಿತರಾದ ದೆಹಲಿಯ ಕಿಶನ್‌ ಗಂಜ್‌ನ ಮೊಹಮ್ಮದ್ ಇಲ್ತಾಜ್, ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ, ಬೆಂಗಳೂರಿನ ಜಯಮಹಲ್‌ ನಿವಾಸಿ ಡಿ.ಎಸ್‌.ಮುನಾವರ್ ಅಹ್ಮದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 39ನೇ ಎಸಿಎಂಎಂ ನ್ಯಾಯಾಲಯದ ಪುರಸ್ಕರಿಸಿದೆ'ಆರೋಪಿಗಳು 1 ಲಕ್ಷ ಮೊತ್ತದ ಮುಚ್ಚಳಿಕೆ ನೀಡಬೇಕು, ಇಬ್ಬರು ವ್ಯಕ್ತಿಗಳು ಜಾಮೀನು ಒದಗಿಸಬೇಕು, ಆರೋಪಿಗಳು ಭಾರತ ಬಿಟ್ಟು ಹೋಗಬಾರದು, ವಿಚಾರಣಾ ನ್ಯಾಯಾಲಯದ ಮುದ್ದತುಗಳಿಗೆ ಹಾಜರಾಗಬೇಕು ಮತ್ತು ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಕೂಡದು' ಎಂಬ ಷರತ್ತುಗಳನ್ನು ವಿಧಿಸಲಾಗಿದೆ.ಆರೋಪಿಗಳ ಪರ ವಕೀಲರು ಮಂಡಿಸಿದ, 'ಪೊಲೀಸರು ಪ್ರಕರಣ ದಾಖಲಿಸುವ ಮುನ್ನ ಪೂರ್ವಾನುಮತಿ ಪಡೆದಿಲ್ಲ. ಆರೋಪಿಗಳಿಗೆ ಸಿಆರ್‌ಪಿಸಿ ಕಲಂ 41ರ ಅನ್ವಯ ನೋಟಿಸ್‌ ನೀಡಿಲ್ಲ. ಅಂತೆಯೇ, ಆರೋಪಿಸಲಾದ ಘೋಷಣೆಯ ಮಾದರಿಯನ್ನು ಧ್ವನಿ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಾಗಾಗಿ, ಇದು ಮೇಲ್ನೋಟಕ್ಕೆ ಸಾಕ್ಷ್ಯವೇ ಇಲ್ಲದ ಪ್ರಕರಣ ಎಂಬುದು ಸಾಬೀತಾಗುತ್ತದೆ' ಎಂಬ ಅಂಶಗಳನ್ನು ಪರಿಗಣಿಸಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.ಪ್ರಕರಣದ ಹಿನ್ನೆಲೆ ಏನು..?ಕಳೆದ ತಿಂಗಳ 27ರಂದು ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣೆಗೆ ಮತದಾನ ನಡೆದಿತ್ತು. ಫಲಿತಾಂಶ ಪ್ರಕಟವಾದ ಬಳಿಕ, ವಿಜೇತ ಅಭ್ಯರ್ಥಿ ನಾಸಿರ್‌ ಹುಸೇನ್‌ ಪರ ಸಂಭ್ರಮಾಚರಿಸುವ ವೇಳೆ ಆರೋಪಿಗಳು ಪಾಕಿಸ್ತಾನ್ ಪರ ಎಂಬ ಘೋಷಣೆ ಕೂಗಿದ್ದಾರೆ ಎಂದು ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಪ್ರತಿಪಕ್ಷ ಬಿಜೆಪಿ ಸದನದ ಒಳಗೆ ಹೊರೆಗೆ ಭಾರಿ ಹೋರಾಟ ಮಾಡಿದ ನಂತರ ಎಫ್‌ಎಸ್‌ಎಲ್ ವರದಿಯಲ್ಲಿ ಘೋಷಣೆ ಕೂಗಿದ್ದು ದೃಢಪಟ್ಟ ನಂತರ ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು
Author Image

Advertisement