For the best experience, open
https://m.bcsuddi.com
on your mobile browser.
Advertisement

ಪತ್ರಕರ್ತರ ರಾಜ್ಯ ಸಮ್ಮೇಳನದ ಲಾಂಛನ ಮುಖ್ಯ ಮಂತ್ರಿಗಳಿಂದ ಬಿಡುಗಡೆ.!

07:10 AM Nov 11, 2023 IST | Bcsuddi
ಪತ್ರಕರ್ತರ ರಾಜ್ಯ ಸಮ್ಮೇಳನದ ಲಾಂಛನ ಮುಖ್ಯ ಮಂತ್ರಿಗಳಿಂದ ಬಿಡುಗಡೆ
Advertisement

ಬೆಂಗಳೂರು: ಬರುವ ಜನವರಿ ಮಾಹೆಯಲ್ಲಿ ದಾವಣಗೆರೆಯಲ್ಲಿ ನಡೆಸಲುದ್ದೇಶಿಸಿರುವ ಪತ್ರಕರ್ತರ 38ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅನಾವರಣ ಮಾಡಿದರು.

ಮುಖ್ಯಮಂತ್ರಿಗಳ ಗೃಹ ಕಛೇರಿ `ಕಾವೇರಿ' ಯಲ್ಲಿ ನಿನ್ನೆ ಏರ್ಪಾಡಾಗಿದ್ದ ಸರಳ ಸಮಾರಂಭದಲ್ಲಿ ದಾವಣಗೆರೆ ಜಿಲ್ಲೆಗೆ ಕೀರ್ತಿ ತರುವಂತಿರುವ ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡಿರುವ ಲಾಂಛನವನ್ನು ಮುಖ್ಯಮಂತ್ರಿಗಳು ಅನಾವರಣ ಮಾಡಿದಾಗ ಪತ್ರಕರ್ತರು ಚಪ್ಪಾಳೆ ತಟ್ಟುವುದರ ಮೂಲಕ ಸಂಭ್ರಮಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮ್ಮೇಳನವು ರಾಜ್ಯದ ಸಮಸ್ತ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಪೂರಕವಾಗಿರುವ ನಿಟ್ಟಿನಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವಂತೆ ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕೆ ಖಾತೆ ಸಚಿವರೂ ಆಗಿರುವ ರಾಜ್ಯ ಪತ್ರಕರ್ತರ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಶಾಮನೂರು ಮಲ್ಲಿಕಾರ್ಜುನ್ ಅವರು ಮಾಡಿಕೊಂಡ ಮನವಿಗೆ  ಮುಖ್ಯಮಂತ್ರಿಗಳು, ಸಮ್ಮೇಳನಕ್ಕೆ ಸರ್ಕಾರದಿಂದ  ಸಹಕಾರ ನೀಡುವುದಲ್ಲದೇ, ಈ ಸಮ್ಮೇಳನದಲ್ಲಿ ತಾವು ಭಾಗವಹಿಸುವ ಬಗ್ಗೆ ಶೀಘ್ರ ದಿನಾಂಕ ನಿಗದಿಪಡಿಸುವುದಾಗಿ ಭರವಸೆ ನೀಡಿದರು.

ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ ಮಾತನಾಡಿ, ತಾವು ಸಮ್ಮೇಳನಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರಲ್ಲದೇ, ನಾವೆಲ್ಲರೂ ಸೇರಿ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, 2 ದಿನಗಳ ಈ ಸಮ್ಮೇಳನವು ರಾಜ್ಯದ ಮಧ್ಯಬಿಂದು ದಾವಣಗೆರೆಯಲ್ಲಿ ನಡೆಯುತ್ತಿರುವುದರಿಂದ ರಾಜ್ಯದ ಮೂಲೆ-ಮೂಲೆಗಳಿಂದ ಸುಮಾರು 6000ಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ಈ ಸಮ್ಮೇಳನವು 31 ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ತಾಲ್ಲೂಕು ಆಗಿದ್ದ ದಾವಣಗೆರೆಯಲ್ಲಿ ನಡೆದಿತ್ತು. ಈಗ, ದಾವಣಗೆರೆ ಜಿಲ್ಲೆ ರಚನೆಯಾದ 25 ವರ್ಷಗಳ ನಂತರ ಇದೇ ಪ್ರಪ್ರಥಮ ಸಮ್ಮೇಳನ ಎಂದು ಹೇಳಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ಖಜಾಂಚಿ ಎನ್.ವಿ. ಬದರೀನಾಥ್, ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ. ಒಡೆಯರ್ ಅವರುಗಳು ಮುಖ್ಯಮಂತ್ರಿಗಳಿಗೆ ಗೌರವ ಸಲ್ಲಿಸಿದರು.

ಸಂಘದ ರಾಜ್ಯ ಸಮಿತಿ ಸದಸ್ಯ ದೇವರಾಜ್, ಸಂಘದ ದಾವಣಗೆರೆ ಜಿಲ್ಲಾ ಉಪಾಧ್ಯಕ್ಷರುಗಳಾದ ಹೆಚ್.ಎನ್. ಪ್ರಕಾಶ್, ಆರ್.ಎಸ್. ತಿಪ್ಪೇಸ್ವಾಮಿ, ಕಾರ್ಯದರ್ಶಿಗಳಾದ ಜಿ.ಎನ್. ನಿಂಗೋಜಿರಾವ್, ಜಿ.ಎಸ್. ವೀರೇಶ್, ನಿರ್ದೇಶಕರುಗಳಾದ ಎನ್. ಕೃಷ್ಣೋಜಿರಾವ್, ಹೆಚ್. ಚಂದ್ರಶೇಖರ್, ಸಿ. ವೇದಮೂರ್ತಿ, ಎಂ. ಗುರುಮೂರ್ತಿ, ಪತ್ರಕರ್ತರಾದ ಮಂಜುನಾಥ ಪಿ. ಕಾಡಜ್ಜಿ, ಕೆ. ಜೈಮುನಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags :
Author Image

Advertisement