For the best experience, open
https://m.bcsuddi.com
on your mobile browser.
Advertisement

ನೀಟ್‌ ಯುಜಿ ವಿವಾದ: 1563 ವಿದ್ಯಾರ್ಥಿಗಳಿಗೆ ಜೂ. 23 ಮರುಪರೀಕ್ಷೆ

02:00 PM Jun 13, 2024 IST | Bcsuddi
ನೀಟ್‌ ಯುಜಿ ವಿವಾದ  1563 ವಿದ್ಯಾರ್ಥಿಗಳಿಗೆ ಜೂ  23 ಮರುಪರೀಕ್ಷೆ
Advertisement

ನವದೆಹಲಿ:ನೀಟ್‌ ಯಜಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್‌ ಅಂಕಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

1563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನು ತೆಗೆದುಕೊಳ್ಳಲು ಆಯ್ಕೆಯನ್ನು ನೀಡಲಾಗುತ್ತದೆ ಅಥವಾ ಗ್ರೇಸ್ ಅಂಕಗಳಿಲ್ಲದೆ ಪಡೆದ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಹೇಳಿದೆ.ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನೀಟ್‌ ಅನ್ಯಾಯ ಸೇರಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಎಲ್ಲಾ ಅರ್ಜಿಗಳನ್ನು ಜುಲೈ 8 ರಂದು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್‌ ತಿಳಿಸಿದೆ.

ಜೂನ್ 23 ರಂದು ಮರುಪರೀಕ್ಷೆ ನಡೆಯುವ ಸಾಧ್ಯತೆಯಿದ್ದು, ಜುಲೈ 1 ರ ಮೊದಲು ಫಲಿತಾಂಶ ಹೊರಬೀಳಲಿದೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ವಿಳಂಬಗೊಂಡು ಗ್ರೇಸ್‌ ಅಂಕ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಮರು ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

Advertisement

ಗ್ರೇಸ್ ಮಾರ್ಕ್ ನೀಡಿರುವುದನ್ನು ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಎನ್‌ಟಿಎ ಮರುಪರಿಶೀಲನೆಗೆ ಸಮಿತಿಯೊಂದನ್ನು ರಚಿಸಿತ್ತು. 6 ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡುವಾಗ ವಿಳಂಬವಾಗಿದೆ. ಹೀಗಾಗಿ ಈ ಅಭ್ಯರ್ಥಿಗಳಿಗೆ ಒಂದು ಆಯ್ಕೆಯನ್ನು ನೀಡಬೇಕೆಂದು ಕೋರ್ಟ್‌ ಮುಂದೆ ವಕೀಲ ಸಾಯ್‌ ದೀಪಕ್‌ ಮನವಿ ಮಾಡಿದರು.

ಈ ಬಾರಿ ನೀಟ್‌ ಪರೀಕ್ಷೆ ನಡೆದ 6 ಕೇಂದ್ರದಲ್ಲಿ ತಪ್ಪು ಪ್ರಶ್ನೆ ಪತ್ರಿಕೆಯನ್ನು ವಿತರಿಸಲಾಗಿತ್ತು. ಇದರಿಂದಾಗಿ ಅಭ್ಯರ್ಥಿಗಳು 45 ನಿಮಿಷಗಳನ್ನು ಕಳೆದುಕೊಳ್ಳವಂತಾಗಿತ್ತು. ಪರೀಕ್ಷೆ ಬರೆಯಲು ಕಡಿಮೆ ಸಮಯ ಸಿಕ್ಕಿದ್ದಕ್ಕೆ ಈ ಕೇಂದ್ರದ ವಿದ್ಯಾರ್ಥಿಗಳಿಗೆ ಎನ್‌ಟಿಎ ಗ್ರೇಸ್‌ಮಾರ್ಕ್‌ ನೀಡಿತ್ತು.

ಈ ಗ್ರೇಸ್‌ ಮಾರ್ಕ್‌ ಪರಿಣಾಮ ದಾಖಲೆಯ 67 ವಿದ್ಯಾರ್ಥಿಗಳು ಮೊದಲ ರ್‍ಯಾಂಕ್‌ ಪಡೆದಿದ್ದರು. ಈ ಪೈಕಿ ಬಹುತೇಕರು, ಮೇಘಾಲಯ, ಹರ್ಯಾಣದ ಬಹದುರ್ಗಾ, ಛತ್ತೀಸ್‌ಗಢ ದಂತೇವಾಡಾ, ಬಲ್ಡೋಹ್‌, ಗುಜರಾತ್‌ನ ಸೂರತ್‌ ಮತ್ತು ಚಂಡೀಗಢದ ಪರೀಕ್ಷಾ ಕೇಂದ್ರಗಳಿಗೆ ಸೇರಿದವರಾಗಿದ್ದಾರೆ. ಜೊತೆಗೆ ಅನುಕ್ರಮ ಸಂಖ್ಯೆಯಲ್ಲಿ 7 ಅಭ್ಯರ್ಥಿಗಳು ಮೊದಲ ರ್‍ಯಾಂಕ್‌ ಪಡೆದಿದ್ದಾರೆ.

6 ಪರೀಕ್ಷಾ ಕೇಂದ್ರಗಳ 1563 ನೀಟ್‌ ವಿದ್ಯಾರ್ಥಿಗಳಿಗೆ ಗ್ರೇಸ್‌ ಮಾರ್ಕ್ಸ್‌ ನೀಡಿ ಹೆಚ್ಚಿನ ಅಂಕ ಪಡೆದಿದ್ದೇ ವಿವಾದಕ್ಕೆ ಮುಖ್ಯ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಜೂ.4ರಂದು ಯಾವುದೇ ಮುನ್ಸೂಚನೆ ನೀಡದೇ ಲೋಕಸಭಾ ಚುನಾವಣೆ ಫಲಿತಾಂಶದ ದಿನ ಸಂಜೆ ಏಕಾಏಕಿ ನೀಟ್‌ ಫಲಿತಾಂಶ ಪ್ರಕಟಿಸಲಾಗಿತ್ತು

Author Image

Advertisement