ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಿನ್ನೆ 60 ಸ್ಥಳಗಳಲ್ಲಿಲೋಕಾಯುಕ್ತರ ದಾಳಿಯಿಂದ ವಶಪಡಿಸಿಕೊಂಡ ಮೊತ್ತ ಎಷ್ಟು.?

07:58 AM Jul 20, 2024 IST | Bcsuddi
Advertisement

 

Advertisement

ಬೆಂಗಳೂರು: ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ 11 ಮಂದಿ ಸರ್ಕಾರಿ ಅಧಿಕಾರಿಗಳು ಹಾಗೂ ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸೇರಿದ 60 ಸ್ಥಳಗಳಲ್ಲಿ ಶುಕ್ರವಾರ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು, ಒಟ್ಟು ₹1.20 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಳಿ ಒಟ್ಟು ₹49.85 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಲಾಗಿದೆ. ಈ ಪೈಕಿ ₹33.85 ಕೋಟಿ ಮೌಲ್ಯದ ಸ್ಥಿರಾಸ್ತಿ, ₹5.70 ಕೋಟಿ ಮೌಲ್ಯದ ಚಿನ್ನಾಭರಣ, ₹2.05 ಕೋಟಿ ಮೌಲ್ಯದ ವಾಹನಗಳು, ₹4.05 ಕೋಟಿ ಮೌಲ್ಯದ ಇತರ ಸ್ವತ್ತುಗಳು ಸೇರಿವೆ ಎಂದು ಲೋಕಾಯುಕ್ತ ಪೊಲೀಸ್ ವಿಭಾಗದ ಪ್ರಕಟಣೆ ತಿಳಿಸಿದೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 12 ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿರುವ ಕೆಎಎಸ್ ಅಧಿಕಾರಿ ಸಿ.ಎಲ್. ಆನಂದ್, ಇನ್ವೆಸ್ಟ್ ಕರ್ನಾಟಕ ಫೋರಂನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಿ.ಟಿ. ಮುದ್ದುಕುಮಾರ್, ಕಾನೂನು ಮಾಪನಶಾಸ್ತ್ರ ಇಲಾಖೆಯ ಬೆಂಗಳೂರು ನಗರದ ಉಪ ನಿಯಂತ್ರಕ ಮೀರ್ ಅತ್ಥರ್ ಅಲಿ, ಮೈಸೂರು ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್, ಹೆಬ್ಬಗೋಡಿ ನಗರಸಭೆ ಆಯುಕ್ತ ಕೆ. ನರಸಿಂಹಮೂರ್ತಿ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ರಮೇಶ್ ಕುಮಾರ್, ತೋಟಗಾರಿಕೆ ಇಲಾಖೆಯ ಶಿವಮೊಗ್ಗ ಜಿಲ್ಲಾ ಉಪ ನಿರ್ದೇಶಕ ಪ್ರಕಾಶ್ ಜಿ.ಎನ್., ಯಾದಗಿರಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಲವಂತ ರಾಥೋಡ್, ದೊಡ್ಡಬಳ್ಳಾಪುರ ತಾಲ್ಲೂಕಿನ ರಾಮೇಶ್ವರದ ಪಶುಸಂಗೋಪನಾ ನಿರೀಕ್ಷಕ ಆರ್. ಸಿದ್ದಪ್ಪ, ಕೆಐಎಡಿಬಿ ಭೂಸ್ವಾಧೀನಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಬಿ.ವಿ. ರಾಜ, ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಟಿ.ಆರ್. ಮತ್ತು ಭದ್ರಾವತಿ ತಾಲ್ಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮೇಲೆ ದಾಳಿ ನಡೆದಿದೆ.

ಚೇತನ್ ಕುಮಾರ್ ಮನೆಯಲ್ಲಿ ಅತ್ಯಧಿಕ ₹58 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಅತ್ಥರ್ ಅಲಿ ಮನೆಯಲ್ಲಿ ₹28.15 ಲಕ್ಷ ನಗದು ಪತ್ತೆಯಾಗಿದ್ದರೆ, ಪ್ರಕಾಶ್ ಜಿ.ಎನ್. ಮನೆಯಲ್ಲಿ ₹12.86 ಲಕ್ಷ ನಗದು ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಲೋಕಾಯುಕ್ತದ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಥಾಕೂರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಂಸ್ಥೆಯ ಪೊಲೀಸ್ ವಿಭಾಗದ 85 ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

 

Advertisement
Next Article