ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ನಮ್ಮ ಗ್ಯಾರಂಟಿ ಯೋಜನೆಗಳೇ ಜನರ ಕಷ್ಟ ನಿವಾರಣೆಯ ಮಂತ್ರಾಕ್ಷತೆ, ಅನ್ನಭಾಗ್ಯ ಅಕ್ಕಿಗೆ ಅರಿಶಿನ ಹಚ್ಚಿ "ಮಂತ್ರಾಕ್ಷತೆ" ಮಾಡಿ ಹಂಚುತ್ತಿದ್ದಾರೆ'-ಡಿಸಿಎಂ

05:18 PM Jan 03, 2024 IST | Bcsuddi
Advertisement

ಬೆಂಗಳೂರು: ಬೇರೆಯವರು ನಮ್ಮ ಅನ್ನಭಾಗ್ಯ ಅಕ್ಕಿಗೆ ಅರಿಶಿನ ಹಚ್ಚಿ "ಮಂತ್ರಾಕ್ಷತೆ" ಮಾಡಿ ಹಂಚುತ್ತಿದ್ದಾರೆ. ಆದರೆ ಜನರ ಹಸಿವಿಗೆ "ಅನ್ನಭಾಗ್ಯ"ವೇ ಮಂತ್ರಾಕ್ಷತೆ, ನಿರುದ್ಯೋಗಕ್ಕೆ "ಯುವನಿಧಿ"ಯೇ ಮಂತ್ರಾಕ್ಷತೆ, ಮಹಿಳೆಯರ ಕಷ್ಟಕ್ಕೆ "ಗೃಹಲಕ್ಷ್ಮಿ"ಯೇ ಮಂತ್ರಾಕ್ಷತೆ, ಮಹಿಳೆಯರ ಪ್ರಯಾಣಕ್ಕೆ "ಶಕ್ತಿ"ಯೇ ಮಂತ್ರಾಕ್ಷತೆ, ಮನೆಯ ಬೆಳಕಿಗೆ "ಗೃಹಜ್ಯೋತಿ"ಯೇ ಮಂತ್ರಾಕ್ಷತೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು.

Advertisement

ಕೆ.ಆರ್ ಪುರದ ಐಟಿಐ ಕ್ರೀಡಾಂಗಣದಲ್ಲಿ ಬುಧವಾರ ನಡೆದ "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ;"ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಗೃಹಜ್ಯೋತಿ ಯೋಜನೆ ಮೂಲಕ ಫಲಾನುಭವಿಗಳಿಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಸಿಗುತ್ತಿವೆ. ಸುಮಾರು ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ರೂಪಾಯಿ ಸಿಗುತ್ತಿದೆ. ಕೆಲವು ತಾಂತ್ರಿಕ ದೋಷಗಳಿಂದ ಕೆಲವರಿಗೆ ಹಣ ತಲುಪಿಲ್ಲ. ಆ ತಾಂತ್ರಿಕ ತೊಡಕುಗಳನ್ನು ನಿವಾರಿಸಿ ಶೀಘ್ರವಾಗಿ ಅವರಿಗೂ ಹಣ ನೀಡಲಾಗುವುದು. ಇಲ್ಲಿರುವ ಕೌಂಟರ್ ಗಳಲ್ಲಿ ಈ ಯೋಜನೆ ಸಿಗದವರು ಕೂಡ ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಂಡು ಫಲಾನುಭವಿಯಾಗಬಹುದು.

ರಾಜಕಾರಣ ಮುಖ್ಯವಲ್ಲ, ನಿಮ್ಮ ಬದುಕು ಮುಖ್ಯ

ಈ ವಿಧಾನಸಭೆ ಕ್ಷೇತ್ರದಲ್ಲಿ ನಾವು ಸೋತಿದ್ದರೂ ನಿಮ್ಮ ಮೇಲೆ ವಿಶ್ವಾಸ ಇಟ್ಟು ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಅಹವಾಲು ಸ್ವೀಕಾರ ಮಾಡುತ್ತಿದ್ದೇವೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಎಂದು ಅಧಿಕಾರಿಗಳನ್ನು ಕರೆದುಕೊಂಡು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ.ನಮಗೆ ರಾಜಕಾರಣ ಮುಖ್ಯ ಅಲ್ಲ. ನಿಮ್ಮ ಬದುಕು ಮುಖ್ಯ. ನಿಮ್ಮ ಬದುಕು ಹಸನಾಗಿಸಲು ನಾವು ಕೆಲಸ ಮಾಡುತ್ತೇವೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ಕಳೆದ ಸರ್ಕಾರದ ಪಾಠ ಪುನರಾವರ್ತನೆ ಆಗಿದೆ:

ಅನುದಾನ ಬಿಡುಗಡೆ ವಿಚಾರದಲ್ಲಿ ಕಳೆದ ಸರ್ಕಾರ ಕಲಿಸಿದ ಪಾಠ ಈಗ ಪುನರಾವರ್ತನೆಯಾಗಿದೆ. ಆದರೂ ಅದನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ.ಈ ಭಾಗದ ಶಾಸಕರಾದ ಭೈರತಿ ಬಸವರಾಜು ಹಾಗೂ ಮಹದೇವಪುರದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಕುಡಿಯುವ ನೀರು, ಸಂಚಾರ ದಟ್ಟಣೆ, ರಾಜಕಾಲುವೆ, ಮಳೆ ನೀರುಗಾಲುವೆ, ಕಸ ವಿಲೇವಾರಿ ವಿಚಾರವಾಗಿ ಗಮನ ಸೆಳೆದಿದ್ದಾರೆ.

ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಲ್ಪಿಸಲು ಬೆಂಗಳೂರಿನ ಹೊರವಲಯದಲ್ಲಿ ನಾಲ್ಕು ಕಡೆ ಜಾಗಗಳನ್ನು ಗುರುತಿಸಲು ತೀರ್ಮಾನಿಸಲಾಗಿದೆ. ಕಸವನ್ನು ಗುಡ್ಡೆ ಹಾಕಿಕೊಂಡರೆ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ಅವುಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ರಾಜಕಾಲುವೆ ಹೂಳೆತ್ತುವ ವಿಚಾರದಲ್ಲಿ NGT ಆದೇಶ ಪಾಲನೆ ಮಾಡಬೇಕಿದೆ. ಆ ಆದೇಶದ ಪ್ರಕಾರ ರಾಜಕಾಲುವೆ ಪಕ್ಕ 50 ಮೀಟರ್ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಹೀಗಾಗಿ ರಾಜಕಾಲುವೆ ಪಕ್ಕದ ಜಾಗವನ್ನು ಸರ್ಕಾರ ವಶಪಡಿಸಿಕೊಂಡು ಅಲ್ಲಿ ರಸ್ತೆ ನಿರ್ಮಾಣ ಮಾಡುವ ಯೋಜನೆ ಇದೆ. ಇದರಿಂದ ರಾಜಕಾಲುವೆ ಹೂಳೆತ್ತಲು ಸಹಕಾರಿ ಆಗುತ್ತದೆ. ಜತೆಗೆ ಸ್ಥಳೀಯ ನಾಗರೀಕರ ಸಂಚಾರಕ್ಕೆ ಹೊಸ ರಸ್ತೆ ಸಿಕ್ಕಂತಾಗುತ್ತದೆ.

ನಿಮ್ಮ ಮನೆ ಬಾಗಿಲಿಗೆ ಆಸ್ತಿ ದಾಖಲೆ ಪತ್ರ ವಿತರಣೆ:

ಇನ್ನು ಅನೇಕರು ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಲ್ಲಿ ಪೂರ್ಣ ಪ್ರಮಾಣದ ಆಸ್ತಿಯ ತೆರಿಗೆ ಪಾವತಿ ಮಾಡುತ್ತಿಲ್ಲ. ಹೀಗಾಗಿ ನಾವು ಎಲ್ಲಾ ಆಸ್ತಿಗಳ ಸಮೀಕ್ಷೆ ಮಾಡುತ್ತಿದ್ದೇವೆ.

ನಮ್ಮ ಸ್ವತ್ತು ಯೋಜನೆ ಮೂಲಕ ಮುಂದಿನ ಒಂದು ವರ್ಷದ ಒಳಗಾಗಿ ನಿಮ್ಮ ಮನೆ ಬಾಗಿಲಿಗೆ ನಿಮ್ಮ ಆಸ್ತಿ ದಾಖಲೆಗಳನ್ನು ಉಚಿತವಾಗಿ ನೀಡುವ ಕೆಲಸ ಮಾಡುತ್ತೇವೆ. ಈ ವಿಚಾರವಾಗಿ ಯಾರೊಬ್ಬರೂ ಯಾರಿಗೂ ಒಂದು ರೂಪಾಯಿ ಲಂಚ ನೀಡುವ ಅಗತ್ಯವಿಲ್ಲ. ಯಾರಾದರೂ ಲಂಚ ಕೇಳಿದರೆ ದೂರು ನೀಡಿ."

ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ನಿಮ್ಮ ಸಮಸ್ಯೆಗಳ ಬಗ್ಗೆ ಅಹವಾಲು ನೀಡಿ. ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು

Advertisement
Next Article