For the best experience, open
https://m.bcsuddi.com
on your mobile browser.
Advertisement

ತುಂಬೆ ಗಿಡದ ಆರೋಗ್ಯ ಪ್ರಯೋಜನ

08:59 AM Oct 25, 2024 IST | BC Suddi
ತುಂಬೆ ಗಿಡದ ಆರೋಗ್ಯ ಪ್ರಯೋಜನ
Advertisement

ಕಾಲದ ಭೇದವಿಲ್ಲದೆ ಕಾಡುವ ಅನಾರೋಗ್ಯ ಎಂದರೆ ಅದು ಜ್ವರ. ಜ್ವರಕ್ಕೆ ಅನೇಕ ಮನೆಮದ್ದುಗಳಿವೆ. ಆದರೆ ತುಂಬೆ ಎಲ್ಲಕ್ಕಿಂತ ಉತ್ತಮ ಎನ್ನಬಹುದು. ತುಂಬೆ ಗಿಡದ ಎಲೆಯ ರಸವನ್ನು ತೆಗೆದು ಕರಿಮೆಣಸಿನ ಕಾಳು ಅಥವಾ ಪುಡಿಯನ್ನು ಸೇರಿಸಿ ಕುದಿಸಿ ಕಷಾಯ ಮಾಡಿಕೊಂಡು ಕುಡಿದರೆ ದೇಹದಲ್ಲಿ ಜ್ವರದ ತಾಪಮಾನ ಅರ್ಧಗಂಟೆಯಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ ದೇಹವನ್ನು ಉತ್ಸಾಹದಿಂದ ಕೂಡಿರುವಂತೆ ಮಾಡುತ್ತದೆ. ಹೀಗಾಗಿ ತುಂಬೆ ಗಿಡವನ್ನು ಜ್ವರದ ವೇಳೆಯಲ್ಲಿ ಉತ್ತಮ ಮನೆಮದ್ದಾಗಿ ಬಳಸಿಕೊಳ್ಳಬಹುದಾಗಿದೆ.

ಒತ್ತಡದ ಜೀವನ, ಇಡೀ ದಿನ ಗ್ಯಾಜೆಟ್‌ಗಳನ್ನು ನೋಡುವ ಪರಿಣಾಮ ಕಣ್ಣಿನ ಉರಿ ಮತ್ತು ಡಾರ್ಕ್‌ ಸರ್ಕಲ್ಸ್‌ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಇದಕ್ಕೆ ತುಂಬೆ ಗಿಡ ಪರಿಹಾರ ನೀಡುತ್ತದೆ. ಹೌದು. ತುಂಬೆ ಗಿಡದ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ನೀರು ಅಥವಾ ಹಾಲನ್ನು ಹಾಕಿ ಮುಖವನ್ನು ತೊಳೆಯಿರಿ. ಇದರಿಂದ ಮುಖಕ್ಕೆ ತಂಪಿನ ಅನುಭವವಾಗುತ್ತದೆ. ಅಲ್ಲದೆ ಇದನ್ನು ಫೇಸ್‌ಪ್ಯಾಕ್‌ ರೀತಿಯಲ್ಲಿ ಬಳಸಿದರೆ ಡಾರ್ಕ್‌ಸರ್ಕಲ್ಸ್‌ ಕೂಡ ಕ್ರಮೇಣ ಕಡಿಮೆಯಾಗುತ್ತದೆ.

ಕೆಲವೊಮ್ಮೆ ತಿಂದ ಆಹಾರ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗದೆ ಅಜೀರ್ಣತೆಯನ್ನು ಉಂಟು ಮಾಡುತ್ತದೆ. ಆಗ ಹೊಟ್ಟೆ ನೋವು, ತಲೆನೋವು, ವಾಂತಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆಲ್ಲ ತುಂಬೆ ಗಿಡ ಪರಿಹಾರ ನೀಡುತ್ತದೆ. ತುಂಬೆ ಗಿಡವನ್ನು ಚೆನ್ನಾಗಿ ತೊಳೆದು ಬಿಸಿ ನೀರಿನಲ್ಲಿ ಹಾಕಿ ಕುದಿಸಿ ನಂತರ ಚಿಟಿಕೆ ಉಪ್ಪು ಸೇರಿಸಿ ಕುಡಿದರೆ ಜೀರ್ಣಶಕ್ತಿ ಉತ್ತಮವಾಗುತ್ತದೆ. ಜೊತೆಗೆ ಉದರದ ಸಮಸ್ಯೆಗಳನ್ನೂ ಪರಿಹರಿಸುತ್ತದೆ. ಹೀಗಾಗಿ ಪಚನಕ್ರಿಯೆಯನ್ನು ಸುಧಾರಿಸಲು ತುಂಬೆ ಗಿಡದ ಬಳಕೆ ಸುಲಭದ ಮಾರ್ಗವಾಗಿದೆ.

Advertisement

ಎಲ್ಲಾ ವಯಸ್ಸಿನವರಿಗೂ ಸಾಮಾನ್ಯವಾಗಿ ಕಾಡುವ ಸಮಸ್ಯೆ ತಲೆನೋವು. ಪ್ರತೀ ಬಾರಿ ತಲೆನೋವು ಎಂದು ಮಾತ್ರೆ ತೆಗೆದುಕೊಂಡರೆ ಕಿಡ್ನಿ ಸೇರಿದಂತೆ ಹಲವು ಅಂಗಗಳಿಗೆ ಹಾನಿಯಾಗುತ್ತದೆ. ಹೀಗಾಗಿ ಮನೆಮದ್ದನ್ನು ಪ್ರಯತ್ನಿಸಿ. ತಲೆನೋವಿನ ಪರಿಹಾರಕ್ಕೆ ತುಂಬೆ ಗಿಡ ಉತ್ತಮ ಔಷಧಿಯಾಗಿದೆ. ತುಂಬೆ ಗಿಡದ ಬೇರು, ಕಾಂಡ, ಎಲೆಯನ್ನು ಸೇರಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಅದರ ಹಬೆಯನ್ನು ತೆಗೆದುಕೊಳ್ಳಿ. ಇದರಿಂದ ತಲೆನೋವು ಬಹುಬೇಗನೆ ವಾಸಿಯಾಗುತ್ತದೆ

ಮಂಡಿ ನೋವು, ಕಾಲು ನೋವು ಸಾಮಾನ್ಯವಾಗಿದೆ. ಆದರೆ ಅದರ ನೋವು ಮಾತ್ರ ತಡೆದುಕೊಳ್ಳುವವರಿಗೇ ಗೊತ್ತು. ಇದಕ್ಕೆ ತುಂಬೆ ಗಿಡ ರಾಮಬಾಣವಾಗಿದೆ. ಒಂದಷ್ಟು ತುಂಬೆ ಗಿಡದ ಕಾಂಡಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತರ ಒಂದು ಬಟ್ಟೆಯನ್ನು ತೆಗೆದುಕೊಂಡು ಕುದಿಸಿ ಇಳಿಸಿಕೊಂಡ ನೀರಿನಲ್ಲಿ ಅದ್ದಿ ನೋವು ಇರುವ ಜಾಗಕ್ಕೆ ಒತ್ತಿಕೊಳ್ಳಿ. ಇದರಿಂದ ನೋವು ನಿವಾರಣೆಯಾಗಿ ಆರಾಮ ಎನಿಸುತ್ತದೆ.

Author Image

Advertisement