ಡಾ. ಕೆ ಸುಧಾಕರ್ ಹೆಗಲಿಗೆ ಮಹತ್ವದ ಜವಾಬ್ದಾರಿ ವಹಿಸಿದ ಬಿಜೆಪಿ ಹೈಕಮಾಂಡ್
ಬೆಂಗಳೂರು: ದೇಶದಲ್ಲಿ ಲೋಕಸಭಾ ಚುನಾವಣಾ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಎರಡು ಹಂತದ ಮತದಾನ ನಡೆದಿದ್ದು, . ಇಂಡಿಯಾ ಒಕ್ಕೂಟ ನಾವೇ ಈ ಬಾರಿ ಅಧಿಕಾರಕ್ಕೆ ಬರುವುದಾಗಿ ವಿಶ್ವಾಸವಿಟ್ಟುಕೊಂಡಿದ್ರೆ, ಇತ್ತ ನಮ್ಮದೇ ಅಧಿಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ನೀಡಿದ್ದಾರೆ. ಇತ್ತ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ. ಕೆ ಸುಧಾಕರ್ ಗೆ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ದಾರಿಯನ್ನ ನೀಡಿದೆ.
ಹೌದು, ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ವಿಶ್ವಾಸದಲ್ಲಿರುವ ಡಾ.ಸುಧಾಕರ್ ಅವರಿಗೆ ಬಿಜೆಪಿ ಹೈಕಮಾಂಡ್ ಈಗ ಮತ್ತೊಂದು ಜವಾಬ್ದಾರಿ ನೀಡಿದೆ. ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಗೆ ಆಂಧ್ರಪ್ರದೇಶದ ಚುನಾವಣಾ ಉಸ್ತುವಾರಿಯನ್ನ ಬಿಜೆಪಿ ಹೈಕಮಾಂಡ್ ನೀಡಿದೆ.
ಆಂಧ್ರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷೆ ಹಾಗು ಮಾಜಿ ಮುಖ್ಯಮಂತ್ರಿ ಎನ್ ಟಿಆರ್ ಪುತ್ರಿ ಪುರಂದೇಶ್ವರಿ ಸ್ಪರ್ಧೆ ಮಾಡುತ್ತಿರುವ ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ನೇಮಕಗೊಂಡಿದ್ದು, ಡಾ. ಕೆ ಸುಧಾಕರ್ ಅವರ ಚುನಾವಣಾ ತಂತ್ರಗಾರಿಕೆ ಬಳಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ತೆಲುಗು ಭಾಷೆಯ ಮೇಲೆ ಹಿಡಿತ ಹಾಗು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ತಮದೇ ಆದ ಪ್ರಭಾವ ಹೊಂದಿರುವ ಸುಧಾಕರ್ ಅವರಿಗೆ ಈ ಹಿಂದೆ ಕೂಡ ಬಿಜೆಪಿ ಹೈಕಮಾಂಡ್ ಹೈದರಾಬಾದ್ ಮಹಾನಗರ ಪಾಲಿಕೆ ಹಾಗು ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಜವಾಬ್ದಾರಿ ನೀಡಿತ್ತು. ಈಗ ಮತ್ತೊಮ್ಮೆ ಆಂಧ್ರಪ್ರದೇಶದಲ್ಲಿ ಸುಧಾಕರ್ ಅವರ ಸಂಘಟನಾ ಚತುರತೆಯನ್ನ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ ವರಿಷ್ಠರ ನಡೆಯಿಂದ ಹೈಕಮಾಂಡ್ ಮಟ್ಟದಲ್ಲಿ ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರ ಸಾಮರ್ಥ್ಯದ ಮೇಲಿರುವ ವಿಶ್ವಾಸ ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.