ಜ್ಞಾನವಾಪಿ ತೀರ್ಪು ವಿರೋಧಿಸಿ ನ್ಯಾಯಾಧೀಶರನ್ನು ನಿಂದಿಸಿದ ವಕೀಲ ಅರೆಸ್ಟ್
ರಾಮನಗರ: ಜ್ಞಾನವಾಪಿ ಮಸೀದಿಯ ನೆಲ ಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಬಹುದು ಎಂದು ವಾರಣಾಸಿ ನ್ಯಾಯಾಲಯ ತೀರ್ಪು ನೀಡಿತ್ತು. ನ್ಯಾಯಾಲಯ ನೀಡಿರುವ ಈ ತೀರ್ಪನ್ನು ವಿರೋಧಿಸಿ ಫೇಸ್ ಬುಕ್ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ರಾಮನಗರ ಮೂಲದ ವಕೀಲನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಕೀಲ ಚಾನ್ ಪಾಷ ಎಂದು ತಿಳಿದು ಬಂದಿದೆ.
ಬಂಧಿತ ವಕೀಲ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿ ನ್ಯಾಯಾಲಯ ನೀಡಿರುವ ತೀರ್ಪಿಗೆ ಸಂಬಂಧಪಟ್ಟಂತೆ ನ್ಯಾಯಾಧೀಶರನ್ನು ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಿದ್ದ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನ್ಯಾಯಾಧೀಶರನ್ನು ನಾಲಾಯಕ್, ಭ್ರಷ್ಟ ಹಾಗೂ ಅವ್ಯಾಚ ಶಬ್ದಗಳನ್ನು ಬಳಸಿ ನಿಂದಿಸಿದ್ದ.
ವಕೀಲ ಮಾಡಿರುವ ಪೋಸ್ಟ್ ವಿರುದ್ಧ ಹಿಂದೂಪರ ಕಾರ್ಯಕರ್ತರು, ಕೆಲ ವಕೀಲರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ರಾಮನಗರದ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ತನ್ನ ವಿರುದ್ಧ ಪ್ರಕರಣ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. ಪೊಲೀಸರು ನ್ಯಾಯಾಂಗ ನಿಂದನೆ ಆರೋಪದಡಿ ವಕೀಲನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.