For the best experience, open
https://m.bcsuddi.com
on your mobile browser.
Advertisement

ಕೋಟೆನಾಡು ದುರ್ಗದಲ್ಲಿ ಅಕ್ಕ-ತಂಗಿಯರ ಭೇಟಿ.!

10:37 PM May 07, 2024 IST | Bcsuddi
ಕೋಟೆನಾಡು ದುರ್ಗದಲ್ಲಿ ಅಕ್ಕ ತಂಗಿಯರ ಭೇಟಿ
Advertisement

ಚಿತ್ರದುರ್ಗ; ನಗರ ದೇವತೆಗಳಾದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ಮತ್ತು ಬರಗೇರಮ್ಮ ದೇವಿ ಭೇಟಿ ಉತ್ಸವ ಮಂಗಳವಾರ ರಾತ್ರಿ ದೊಡ್ಡಪೇಟೆ ರಸ್ತೆಯಲ್ಲಿ ಸಂಭ್ರಮದಿಂದ ನಡೆಯಿತು.

ಗ್ರಾಮದೇವತೆಗಳಾದ ಶ್ರೀ ಬರಗೇರಮ್ಮ ಮತ್ತು ಶ್ರೀ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಿಯರು ಅತ್ಯಂತ ಸುಂದರವಾಗಿ ಅಲಂಕಾರಗೊಂಡು ತಮ್ಮ ಮೂಲ ದೇವಸ್ಥಾನಗಳಿಂದ ಹೊರಡಲಿದ್ದಾರೆ. ನಗರದ ಪಶ್ಚಿಮ ಭಾಗದಲ್ಲಿ ನೆಲೆಸಿರುವ ಬರಗೇರಮ್ಮ ಹಾಗೂ ಪೂರ್ವ ಭಾಗದಲ್ಲಿ ನೆಲೆಸಿರುವ ತಿಪ್ಪಿನಘಟ್ಟಮ್ಮ ದೇವಿಯ ಭೇಟಿ ಉತ್ಸವಕ್ಕೆ ಅಪಾರಭಕ್ತರು ಸಾಕ್ಷಿಯಾದರು. ಸುಮಾರು ರಾತ್ರಿ 9.30 ರಿಂದ 9.45ಕ್ಕೆ ಅಕ್ಕ-ತಂಗಿಯರು ಭೇಟಿಯಾದರು.

Advertisement

ಅಕ್ಕ-ತಂಗಿಯರ ಭೇಟಿ ಉತ್ಸವ ಎಂದೇ ಜನಜನಿತವಾಗಿರುವ ಈ ಉತ್ಸವ ಜಾನಪದ ಸೊಗಡಿನ ಹಿನ್ನೆಲೆ ಹೊಂದಿದೆ. ಸೋಮನ ಕುಣಿತ, ಡೊಳ್ಳು ಕುಣಿತ ದೀವಟಿಗೆ ಧಾರಿಗಳು, ಉರುಮೆನಾದ ತಮಟೆಗಳ ಸದ್ದು ಡೊಳ್ಳುವಾದನಗಳು ಭೇಟಿಯ ಉತ್ಸವಕ್ಕೆ ಮೆರುಗು ನೀಡಿದ್ದವು. ಅತ್ಯಂತ ಸುಂದರವಾಗಿ ಪುಷ್ಪಾಲಂಕೃತಗೊಂಡಿದ್ದ ಅಕ್ಕ-ತಂಗಿಯರು ಪರಸ್ಪರ ಭೇಟಿಗಾಗಿ ತವಕಿಸುತ್ತಿರುವ ದೃಶ್ಯ ಸೊಗಸಾಗಿತ್ತು ಈ ದೃಶ್ಯ ಭಕ್ತಾದಿಗಳನ್ನು ಪುಳಕಿತಗೊಳಿಸಿತು, ಅಕ್ಕ-ತಂಗಿಯವರು ಪರಸ್ಪರ ಬೇಟಿಯಾಗುತ್ತಿದ್ದಯೇ ಸುತ್ತ ಮುತ್ತಲು ನೆರದಿದ್ದ ಭಕ್ತಾಧಿಗಳು ಸೀಳು ಕೇಕೆ, ಚಪ್ಪಾಳೆಯನ್ನು ಹೊಡೆಯುವುದರ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶನ ಮಾಡಿದರು.

ಸಿಂಗಾರಗೊಂಡ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ, ಜನ ಜಾತ್ರೆಯ ನಡುವೆ ರಾಜಬೀದಿಯಲ್ಲಿ ಅಕ್ಕ-ತಂಗಿಯರ ದಿವ್ಯ ಸಮಾಗಮ ಸಾಂಪ್ರದಾಯಿಕ ಅಪೂರ್ವ ಸಂಗಮ ಕಣ್ಣುಂಬಿಕೊಂಡ ಭಕ್ತರಲ್ಲಿ ಪುನೀತ ಭಾವ, ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ರಾಜಬೀದಿಯಲ್ಲಿ, ಹೌದು, ರಂಗಯ್ಯನ ಬಾಗಿಲು ಕಡೆಯಿಂದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಿ ವಯ್ಯಾರದಿ ಆಗಮಿಸಿದರೆ, ಇತ್ತ ಉಚ್ಚಂಗಿ ಎಲ್ಲಮ್ಮ ದೇಗುಲದ ಕಡೆಯಿಂದ ಬಂಗಾರಿ ಬರಗೇರಮ್ಮ ದೇವಿ ಬಿಂಕದಿ ಆಗಮಿಸಿದಳು!

ಇನ್ನು ಈ ವಿಶೇಷ ಉತ್ಸವಕ್ಕೆ ಜಿಲ್ಲಾಡಳಿತ, ನಗರಸಭೆ, ಪೊಲೀಸ್ ಇಲಾಖೆ ಹಾಗೂ ದೇಗುಲ ಸಮಿತಿಗಳು ಈ ವರ್ಷ ವಿಶೇಷ ಸಿದ್ಧತೆಯನ್ನು ಮಾಡಿಕೊಂಡಿದ್ದವು. ರಾಜಬೀದಿ ಉದ್ದಕ್ಕೂ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು ಸಾವಿರಾರು ಜನ ಭಕ್ತರು ಉತ್ಸವದಲ್ಲಿ ಭಾಗಿಯಾಗಿದ್ದರು. ಅಕ್ಕ ತಂಗಿ ಭೇಟಿ ಉತ್ಸವಕ್ಕೆ ಸಾಕ್ಷಿಯಾಗಿ ಸಂಭ್ರಮಿಸಿದರು. ಅಕ್ಕ ತಂಗಿ ಭೇಟಿ ಉತ್ಸವ ದುರ್ಗದ ಪರಂಪರೆಯ ಉತ್ಸವವಾಗಿದೆ. ದುರ್ಗದ ಹೆಣ್ಣುಮಕ್ಕಳು ಈ ಸಂದರ್ಭದಲ್ಲಿ ತವರಿಗೆ ಬಂದು ಅಕ್ಕ-ತಂಗಿ ಭೇಟಿ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುವುದು ವಿಶೇಷ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಅಕ್ಕ-ತಂಗಿಯರ ಅಪರೂಪದ ಸಂಗಮ ವೈಭವದಿಂದಲೇ ನಡೆಯಿತು. ಸಾವಿರಾರು ಜನ ಭಕ್ತರು ಅಪೂರ್ವ ಸಂಗಮ ಕಣ್ಣು ತುಂಬಿಕೊಂಡು ಪುನೀತ ಭಾವ ಅನುಭವಿಸಿದರು.

Author Image

Advertisement