ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕೇರಳ: ಬಿಸಿಲಿನ ಧಗೆಗೆ ಕಾರ್ಮಿಕ ಬಲಿ

09:26 AM May 04, 2024 IST | Bcsuddi
Advertisement

ಕಾಸರಗೋಡು: ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಕಾಸರಗೋಡಿನಲ್ಲಿ ಉಷ್ಣ ಅಲೆಯೂ ಬೀಸತೊಡಗಿದೆ. ಜಿಲ್ಲೆಯಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಉಷ್ಣ ಅಲೆಯ ಪರಿಣಾಮ ಎಂದು ಶಂಕಿಸಲಾಗಿದೆ.

Advertisement

ಕರ್ನಾಟಕದ ಹಾವೇರಿ ಜಿಲ್ಲೆಯ ಸಾವನ್ನೂರು ತಾಲೂಕಿನ ಶಿರಿಬಿದಿಗೆ ಚಂದ್ರಪ್ಪ ಅವರ ಪುತ್ರ ರುದ್ರಪ್ಪ ಲಮಾನಿ (45) ಮೃತಪಟ್ಟವರು. ಅವರು ಕಾಸರಗೋಡಿನಲ್ಲಿ 9 ವರ್ಷದಿಂದ ನಿರ್ಮಾಣ ಕಾರ್ಮಿಕನಾಗಿ ದುಡಿಯುತ್ತಿದ್ದರು. ಜೆ.ಪಿ. ಕಾಲನಿಯ ಖಾಸಗಿ ವಸತಿಗೃಹದಲ್ಲಿ ನೆಲೆಸಿದ್ದರು.

ಮನೆ ಬಳಿಯ ರಸ್ತೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಕಂಡುಬಂದ ಅವರನ್ನು ಸ್ಥಳೀಯರು ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮರಣೋತ್ತರ ವರದಿ ಲಭಿಸಿದ ಬಳಿಕವಷ್ಟೇ ಸಾವಿನ ಸ್ಪಷ್ಟ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

ಉರಿ ಬಿಸಿಲಿನ ಜತೆಗೆ ಉಷ್ಣ ಅಲೆಯೂ ಬೀಸಲಾರಂಭಿಸಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜಾಗ್ರತಾ ನಿರ್ದೇಶವನ್ನೂ ಹೊರಡಿಸಿದೆ. ಅದರಂತೆ ಅಂಗನವಾಡಿಗಳಿಗೆ ಈಗಾಗಲೇ ರಜೆ ಸಾರಲಾಗಿದೆ. ಕಾರ್ಮಿಕ ಇಲಾಖೆಯು ಕಾರ್ಮಿಕರ ದುಡಿಮೆಯನ್ನು ಬೆಳಗ್ಗೆ 11ರಿಂದ ಅಪರಾಹ್ನ 3 ಗಂಟೆಯ ತನಕ ನಿಷೇಧಿಸಿದೆ. ಬೆಳಗ್ಗೆ 10ರಿಂದ ಸಂಜೆ 4 ಗಂಟೆಯ ತನಕ ಎಲ್ಲ ರೀತಿಯ ಕ್ರೀಡಾ ತರಬೇತಿಗಳನ್ನೂ ತಾತ್ಕಾಲಿಕವಾಗಿ ಮುಂದೂಡುವಂತೆ ಕ್ರೀಡಾ ಸಚಿವ ಎ. ಅಬ್ದುಲ್ ರಹಿಮಾನ್ ನಿರ್ದೇಶನ ನೀಡಿದ್ದಾರೆ.

ಮದ್ಯ, ಕಾರ್ಬೋಹೈಡ್ರೆಟ್ ಪಾನೀಯಗಳು, ಚಹಾ, ಕಾಫಿ ಇತ್ಯಾದಿ ಸೇವನೆ ಕಡಿಮೆ ಮಾಡಬೇಕು. ಮನೆ, ಕಚೇರಿ ಮೊದಲಾದೆಡೆ ವಾಯು ಸಂಚಾರಕ್ಕಾಗಿ ಕಿಟಕಿಯ ಬಾಗಿಲನ್ನು ಸದಾ ತೆರೆದಿಡಬೇಕು. ಮಾರ್ಕೆಟ್ ಕಟ್ಟಡಗಳ ಪರಿಸರದಲ್ಲಿ ತ್ಯಾಜ್ಯವನ್ನು ರಾಶಿ ಹಾಕಿದ್ದಲ್ಲಿ ಬಿಸಿಲ ಬೇಗೆಗೆ ಬೆಂಕಿ ತಗಲುವ ಸಾಧ್ಯತೆಯಿರುವುದರಿಂದ ಅವುಗಳನ್ನು ತತ್‌ಕ್ಷಣ ತೆರವುಗೊಳಿಸಬೇಕು. ವಿದ್ಯಾರ್ಥಿಗಳ ವಿಷಯದಲ್ಲಿ ಪೋಷಕರು ಗರಿಷ್ಠ ಜಾಗ್ರತೆ ವಹಿಸಬೇಕು ಎಂದು ಸೂಚಿಸಲಾಗಿದೆ.

Advertisement
Next Article