For the best experience, open
https://m.bcsuddi.com
on your mobile browser.
Advertisement

ಕೆಎಎಸ್‌ ಅಧಿಕಾರಿ ಮಂಜಪ್ಪ ಟಿ ಅವರಿಗೆ ಕುವೆಂಪು ವಿವಿಯ ಗೌರವ ಡಾಕ್ಟರೇಟ್

06:41 PM May 14, 2024 IST | Bcsuddi
ಕೆಎಎಸ್‌ ಅಧಿಕಾರಿ ಮಂಜಪ್ಪ ಟಿ ಅವರಿಗೆ ಕುವೆಂಪು ವಿವಿಯ ಗೌರವ ಡಾಕ್ಟರೇಟ್
Advertisement

ಶಿವಮೊಗ್ಗ: ಕೆಎಎಸ್‌ ಅಧಿಕಾರಿ ಮಂಜಪ್ಪ ಟಿ (ಮಂಜುನಾಥ್‌ ಮಾಗೊದಿ) ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಮೂಲತಃ ಉಪನ್ಯಾಸಕರಾಗಿ ಹಾಗು ಶಿಕ್ಷಣಾಧಿಕಾರಿಯಾಗಿದ್ದ ಮಂಜಪ್ಪ ಟಿ ಅವರು, ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ನಿರ್ದೇಶಕರಾದ ಪ್ರೊ.ಶಿವಾನಂದ ಕೆಳಗಿನಮನಿ ಅವರ ಮಾರ್ಗದರ್ಶನದಲ್ಲಿ *ಕನಕದಾಸರ ಸಾಹಿತ್ಯ ಮತ್ತು ತಳಸಮುದಾಯಗಳು-ಪುನರ್‌ ಚಿಂತನೆ* ಎಂಬ ವಿಷಯ ಕುರಿತು ಮಂಡಿಸಿದ್ದ ಸಂಶೋಧನ ಪ್ರಬಂಧಕ್ಕೆ ಕುವೆಂಪು ವಿವಿ ಪಿಹೆಚ್‌ಡಿ ಪದವಿ ನೀಡಿದೆ.

Advertisement

ಮಂಜುನಾಥ್‌ ಮಾಗೊದಿ ಅವರು ಪ್ರಗತಿಪರ ಚಿಂತಕರು, ಸೃಜನಶೀಲ ಬರಹಗಾರರು ಹಾಗು ಉತ್ತಮ ಕವಿಗಳಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿಯೂ ಇವರು ಸಾಹಿತ್ಯ ಮತ್ತು ಸಂಭಾಷಣೆಕಾರರಾಗಿ ಕಾರ್ಯನಿವರ್ಹಿಸಿದ್ದಾರೆ.

: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಎಂ.ಜಿ.ದಿಬ್ಬ ಗ್ರಾಮದ ಶ್ರೀಮತಿ ಪಾರ್ವತಮ್ಮ ಮತ್ತು ತಿಮ್ಮಪ್ಪನವರ ಮಗನಾಗಿ ಜನಿಸಿದ ಮಂಜುನಾಥ್‌ ಮಾಗೊದಿ ಅವರು ತೀವ್ರ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಕಡುಬಡತನದಲ್ಲೇ ವಿದ್ಯಾಭ್ಯಾಸ ನಡೆಸಿದ ಅವರು, ಪ್ರತಿಭಾವಂತರು, ವಾಗ್ಮಿಗಳು. ಮುಂದಾಲೋಚನೆ ಉಳ್ಳವರು. ದೂರದೃಷ್ಟಿ ಇಟ್ಟುಕೊಂಡೇ ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸ ಕುರಿತು ಬೋಧನೆ ಮಾಡಿದವರು. ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸುವಲ್ಲಿಯೂ ಕಾರಣರಾದವರು. ಹೊಸದುರ್ಗ ತಾಲೂಕಿನಲಿ ಉಪನ್ಯಾಸಕರಾಗಿದ್ದ ಇವರನ್ನು ಇಂದಿಗೂ ಲಕ್ಷಾಂತರ ವಿದ್ಯಾರ್ಥಿಗಳು ಗುರು ಪ್ರೀತಿಯೊಂದಿಗೆ ಹಿಂಬಾಲಿಸುತ್ತಿದ್ದಾರೆ ಎಂಬುದು ವಿಶೇಷ.

ಬಡತನದಲ್ಲೇ ಬೆಳೆದು ಶಿಕ್ಷಣದೊಂದಿಗೆ ಅರಳಿದ ಮಂಜುನಾಥ್‌ ಮಾಗೊದಿ, ಇಂದಿಗೂ ಬಡವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿ, ಕಾಳಜಿ ಇಟ್ಟುಕೊಂಡ ಮಧ್ಯಕರ್ನಾಟಕದ ಪ್ರತಿಭೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಶಿಕ್ಷಣ ಕೆಲಸ ನಿರ್ವಹಿಸಿದ ಇವರ ಬೆನ್ನ ಹಿಂದೆ ಇದೀಗ ದೊಡ್ಡ ವಿದ್ಯಾರ್ಥಿ ಸಮೂಹವೇ ಇದೆ. ಎಲ್ಲೆಡೆ ಶಿಕ್ಷಣ ಕ್ರಾಂತಿ ಮಾಡಿ ಸೈ ಎನಿಸಿಕೊಂಡ ಮಂಜುನಾಥ್‌ ಮಾಗೊದಿ, ಬೆಂಗಳೂರಿಗೆ ಬಂದು ಸರ್ಕಾರದ ಸಚಿವರ ಜೊತೆಗೆ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮುಖ್ಯಮತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ರಾಜಕಾರಣಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡವರು. ಇನ್ನು, ಶಿಕ್ಷಣದ ಬಗ್ಗೆ ಸಾಕಷ್ಟು ಕಾಳಜಿ ವಹಿಸಿರುವ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಹೀಗೆ ಇರಬೇಕು ಅಂದುಕೊಂಡು ಆ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದವರು. ಮಕ್ಕಳ ಶಿಕ್ಷಣದ ಗುಣಮಟ್ಟ ಹೇಗಿದೆ ಎಂಬುದರ ಬಗ್ಗೆಯೂ ಅಧ್ಯಯನ ನಡೆಸಿದ್ದರು. ಇನ್ನು ಸರ್ಕಾರ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ತಯಾರಿಕೆ ಸಮಿತಿಗೆ ಇವರನ್ನು ವಿಶೇಷ ಅಧಿಕಾರಿಯನ್ನಾಗಿಸಿದ್ದ ಸಂದರ್ಭದಲ್ಲಿ ಇವರು ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವಲ್ಲಿ ಕಾರಣರಾಗಿದ್ದರು.

ಇವರು ವರ್ಷಗಳ ಹಿಂದೆ ಬರೆದ ಕವನವೊಂದು ಕುವೆಂಪು ವಿವಿ ಪಠ್ಯಪುಸ್ತಕದಲ್ಲಿ ಪಠ್ಯವಾಗಿದೆ. ಇಂದಿಗೂ ವಿದ್ಯಾರ್ಥಿಗಳು ಆ ಕವನ ಓದುತ್ತಿದ್ದಾರೆ ಎಂಬುದು ವಿಶೇಷ. ಇನ್ನು, ಹೊಸದುರ್ಗ ತಾಲೂಕಿನಲ್ಲಿ ಹಲವು ವಿಷಯಗಳ ಮೂಲಕ ಸದ್ದು ಮಾಡಿ ಸಂಚಲನ ಮೂಡಿಸಿದ್ದು ವಿಶೇಷ. ಆ ತಾಲೂಕಿನ ಅಭಿವೃದ್ಧಿ, ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿಗಳ ವಿಕಸನ ಕುರಿತು ಅಧ್ಯಯನ ನಡೆಸಿದ್ದರು. ಅಂದರೆ ಈ ತಾಲೂಕು ಅಭಿವೃದ್ಧಿ ಪಥದಲ್ಲಿ ಹೀಗೆ ಸಾಗಬೇಕು. ಇಲ್ಲಿನ ರಾಜಕಾರಣಿಗಳು ಇಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂಬ ಕುರಿತಂತೆ ಹಲವು ವಿಷಯಗಳ ಬಗ್ಗೆ ತಿಳಿವಳಿಕೆಯ ಅಧ್ಯಯನ ಮಾಡಿದ್ದರು. ಅದು ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿತ್ತು.

ಮಂಜುನಾಥ್‌ ಮಾಗೊದಿ ಅವರು, ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಕೆಎಎಸ್‌ ಅಧಿಕಾರಿಯಾಗಿ ಯಶಸ್ವಿಯಾಗಿ ಕಾರ್ಯನಿವರ್ಹಿಸಿದವರು. *ಕನಕದಾಸರ ಸಾಹಿತ್ಯ ಮತ್ತು ತಳಸಮುದಾಯಗಳು-ಪುನರ್‌ ಚಿಂತನೆ* ಎಂಬ ವಿಷಯ ಕುರಿತು ಮಂಡಿಸಿದ್ದ ಸಂಶೋಧನ ಪ್ರಬಂಧಕ್ಕೆ ಕುವೆಂಪು ವಿವಿ ಪಿಹೆಚ್‌ಡಿ ಪದವಿ ನೀಡಿ ಗೌರವಿಸಿರುವುದು ಅವರ ಆಪ್ತ ಬಳಗಕ್ಕೆ ಸಂತಸ ಹೆಚ್ಚಿಸಿದೆ.

Author Image

Advertisement