ಕಣ್ಣೂರಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಯುವತಿ ಮೃತ್ಯು: ನಕ್ಸಲ್‌ರಿಂದ ಪ್ರತೀಕಾರದ ಪೋಸ್ಟರ್
ಕೇರಳ: ಕಣ್ಣೂರಿನ ಅಯ್ಯನಕುನ್ನುದ ಆರಳದಲ್ಲಿ ನ. ೧೩ ರಂದು ನಡೆದ ಪೊಲೀಸರ ಥಂಡರ್ ಬೋಲ್ಟ್ ತಂಡ ಮತ್ತು ಮಾವೋವಾದಿಗಳ ಕಾದಾಟದಲ್ಲಿ ಪೊಲೀಸರ ಗುಂಡೇಟಿನಿಂದ ಗಂಭೀರಗಾಯಗೊಂಡ ಯುವತಿ ಮೃತಪಟ್ಟ ಮಾಹಿತಿಯನ್ನು ಮಾವೋವಾದಿಗಳು ಪೋಸ್ಟರ್ ಮೂಲಕ ಬಹಿರಂಗಪಡಿಸಿದ್ದಾರೆ.
ಮೃತ ಯುವತಿಯನ್ನು ಆಂಧ್ರ ಪ್ರದೇಶ ಮೂಲದ ಲಕ್ಷ್ಮಿ ಅಲಿಯಾಸ್ ಕವಿತಾ ಎಂದು ವರದಿ ಮೂಲಕ ತಿಳಿದು ಬಂದಿದೆ.
ಕಣ್ಣೂರಿನಲ್ಲಿ ನಕ್ಸಲರ ಹಾಜರಿ ಕುರಿತಾದ ಮಾಹಿತಿಯ ಆಧಾರದಲ್ಲಿ ಪೊಲೀಸರು ಪರಿಶೀಲನೆ ನಡೆಸುವಾಗ, ನಕ್ಸಲರು ಗುಂಡು ಹಾರಿಸಿದ್ದರು. ಇದಕ್ಕೆ ಥಂಡರ್ ಬೋಲ್ಟ್ ಪ್ರತಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಲಕ್ಷ್ಮಿ ಅಲಿಯಾಸ್ ಕವಿತಾ ಎಂಬಾಕೆ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಬಳಿಕ ಆಕೆಯನ್ನು ಚಿಕಿತ್ಸೆಗಾಗಿ ಬೇರೆಡೆ ಸ್ಥಳಾಂತರಿಸಿದ್ದರು. ಆದರೆ ಕವಿತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಕಾರಣಕ್ಕಾಗಿ ಪ್ರತೀಕಾರ ತೀರಿಸಲಾಗುವುದು ಎಂದು ಮಾವೋವಾದಿಗಳು ಪೋಸ್ಟರ್ ಮೂಲಕ ತಿಳಿಸಿದ್ದಾರೆ.
ಇನ್ನು ವಯನಾಡಿನ ತಿರುನೆಲ್ಲಿಯ ಗುಂಡಿಕ ಪರಂಬ್ ಕಾಲೋನಿಯಲ್ಲಿ ಪ್ರತೀಕಾರದ ಪೋಸ್ಟರ್ ಹಾಕಲಾಗಿದ್ದು, ಡಿ. ೨೮ ರ ರಾತ್ರಿ ವೇಲೆ ಕಾಲೋನಿಗೆ ಬಂದ ಐದಾರು ನಕ್ಸಲರ ತಂಡ 5 ಪೋಸ್ಟರ್ ಮತ್ತು ಒಂದು ಚೀಟಿಯನ್ನು ಅಂಟಿಸಿದ್ದಾರೆ. ಇದರಲ್ಲಿ ತಮ್ಮ ನಾಯಕಿಯ ಸಾವಿನ ಪ್ರತೀಕಾರ ತೀರಿಸಿಕೊಳ್ಳುವುದಾಗಿ ನಕ್ಸಲರ ಗುಂಪು ಪೋಸ್ಟರ್‌ಗಳಲ್ಲಿ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.