ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಇಡೀ ಪಕ್ಷ, ಸರ್ಕಾರ ಒಂದಾಗಿ ಸಿದ್ದರಾಮಯ್ಯ ಪರಗಿ ನಿಂತಿದೆ: ಡಿಕೆಶಿ

10:16 AM Aug 09, 2024 IST | BC Suddi
Advertisement

ಮೈಸೂರು: "ಹಿಂದುಳಿದ ವರ್ಗದ ನಾಯಕರಾದ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗದೆ ಬಿಜೆಪಿ ಹಾಗೂ ಜೆಡಿಎಸ್ ಅವರ ತೇಜೋವಧೆ ಮಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಇಡೀ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ಪರವಾಗಿ ನಿಲ್ಲಲಿದೆ" ಎಂದು ಡಿಸಿಎಂ. ಡಿ.ಕೆ. ಶಿವಕುಮಾರ್ ತಿಳಿಸಿದರು.

Advertisement

ಮೈಸೂರಿನಲ್ಲಿ ನಾಳೆ ನಡೆಯಲಿರುವ ಜನಾಂದೋಲನ ಸಮಾವೇಶದ ಪೂರ್ವಭಾವಿ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮಗಳಿಗೆ ಶಿವಕುಮಾರ್ ಪ್ರತಿಕ್ರಿಯಿಸಿದರು.

ಬಿಜೆಪಿ ಹಾಗೂ ಜೆಡಿಎಸ್ ಆರೋಪ, ಕುತಂತ್ರಗಳನ್ನು ನೀವು ತಡೆದುಕೊಳ್ಳುತ್ತೀರಿ, ಸಿದ್ದರಾಮಯ್ಯ ಅವರು ಅರಗಿಸಿಕೊಳ್ಳಲು ಕಷ್ಟ ಅಲ್ಲವೇ ಎಂದು ಕೇಳಿದಾಗ, "ಸಿದ್ದರಾಮಯ್ಯ ಭಾವುಕ ವ್ಯಕ್ತಿ. ಅವರ ಆರೋಪ ನಿಜವಾಗಿದ್ದರೆ ಅರಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆದರೆ ಸುಳ್ಳು ಆರೋಪ ಅವರಿಗೆ ಮಾನಸಿಕ ಹಿಂಸೆಯಾಗಿದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರ ತೇಜೋವಧೆಗೆ ಉಭಯ ಪಕ್ಷಗಳು ಮುಂದಾಗಿವೆ. ಇದಕ್ಕಾಗಿ ಇಡೀ ಪಕ್ಷ ಹಾಗೂ ಸರ್ಕಾರ ಒಂದಾಗಿ ಸಿದ್ದರಾಮಯ್ಯ ಅವರ ಪರವಾಗಿ ನಿಂತಿದ್ದೇವೆ" ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ರಕ್ಷಣೆಗೆ ನೀವೇ ಬಂಡೆಯಾಗಿ ನಿಂತಿದ್ದೀರಿ ಎಂದು ಕೇಳಿದಾಗ, " ಬಂಡೆಯೋ,ತೋಳೊ. ನಾನಂತೂ ಅವರ ಪರವಾಗಿ ಇದ್ದೇನೆ, ಮುಂದೆಯೂ ಇರುತ್ತೇನೆ" ಎಂದು ತಿಳಿಸಿದರು.

ಪಾಪ ವಿಮೋಚನಾ ಯಾತ್ರೆ ಪ್ರಶ್ನಿಸಿ ಜನಾಂದೋಲನ:

"ಭ್ರಷ್ಟಾಚಾರಗಳಿಂದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ನಡೆಸುತ್ತಿರುವ ಪಾದಯಾತ್ರೆ ವಿರುದ್ಧ ಪ್ರಶ್ನೆ ಮಾಡಲು ಜನಾಂದೋಲನ ಸಮಾವೇಶ ಹಮ್ಮಿಕೊಂಡಿದ್ದೇವೆ. ಅವರದು ಪಾಪ ವಿಮೋಚನಾ ಯಾತ್ರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 25 ಹಗರಣಗಳು ನಡೆದಿದ್ದು, ಕುಮಾರಸ್ವಾಮಿ ಅವರ ಕುಟುಂಬದ ಹಗರಣಗಳ ಬಗ್ಗೆ ಅವರು ಉತ್ತರ ನೀಡಬೇಕು" ಎಂದು ತಿಳಿಸಿದರು.

"ಮುಖ್ಯಮಂತ್ರಿಗಳು ಸದನದಲ್ಲಿ ಉತ್ತರ ನೀಡುವಾಗ ಬಿಜೆಪಿ ಕಾಲದ ಹಗರಣಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಅದರ ತನಿಖೆಯೂ ನಡೆಯುತ್ತಿದೆ. ಇದನ್ನು ಮುಚ್ಚಲು ಬಿಜೆಪಿ ಪ್ರಯತ್ನಿಸಿತು. ನಾವು ಅವುಗಳನ್ನು ಬಿಚ್ಚಿಟ್ಟಿದ್ದೇವೆ. ಯಾರಿಗೆ ಎಷ್ಟೆಷ್ಟು ಪಾಲು ಹೋಗಿದೆ. ಆ ಹಗರಣ ನಡೆದಾಗ ಯಾರು ಮುಖ್ಯಮಂತ್ರಿ? ಯಾರು ಮಂತ್ರಿಯಾಗಿದ್ದರು? ಎಂದು ಜನರಿಗೆ ಮಾಹಿತಿ ನೀಡಬೇಕು" ಎಂದು ತಿಳಿಸಿದರು.

"ಅವರು ವಾಲ್ಮೀಕಿ ಹಗರಣದ ಬಗ್ಗೆ ಪ್ರಸ್ತಾಪ ಮಾಡಿದ್ದು, ಈ ಹಗರಣವನ್ನು ಅಧಿಕಾರಿಗಳು ನಡೆಸಿದ್ದಾರೆ ಎಂದು ಒಪ್ಪಿ ನಾವು ತನಿಖೆ ಮಾಡಿದ್ದೇವೆ. ಅಲ್ಲದೆ ಆರೋಪಪಟ್ಟಿಯನ್ನು ಸಲ್ಲಿಕೆ ಮಾಡಲಾಗಿದೆ. ಇದರಲ್ಲಿ ಮಂತ್ರಿ ಹಾಗೂ ಶಾಸಕರ ಹಸ್ತಕ್ಷೇಪ ಇಲ್ಲ ಎಂದು ಮಾಧ್ಯಮಗಳ ವರದಿ ನೋಡಿದ್ದೇನೆ" ಎಂದರು.

"ಮುಡಾ ವಿಚಾರವಾಗಿಯೂ ನಾವು ಚರ್ಚೆ ಮಾಡಿದ್ದೇವೆ. ತವರುಮನೆ ಯಿಂದ ಉಡುಗೊರೆಯಾಗಿ ಬಂದ ಜಮೀನನ್ನು ಮುಡಾ ಒತ್ತುವರಿ ಮಾಡಿದ್ದಕ್ಕೆ ಅರ್ಜಿ ಹಾಕಿದ್ದು, ಅದನ್ನು ಮುಡಾ ಸಭೆಯಲ್ಲಿ ಒಪ್ಪಿ ನಿರ್ಣಯ ಕೈಗೊಂಡು ನಿವೇಶನ ನೀಡಿರುವುದು ನಿಜ. ಇವರು ಪರಿಹಾರ ಕೇಳುವಾಗ ಇಂತಹದೇ ಜಾಗದಲ್ಲಿ ಕೊಡಿ ಎಂದು ಕೇಳಿಲ್ಲ. ಈ ಪ್ರಕರಣದ ತನಿಖೆಗೆ ಆದೇಶ ಮಾಡಲಾಗಿದ್ದು, ತಪ್ಪಿತಸ್ಥರಿಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳ ಕುಟುಂಬದಲ್ಲಿ ತಪ್ಪಾಗಿದ್ದರೂ ತನಿಖೆ ನಡೆಯಲಿ ಎಂದು ಅವರೂ ಒಪ್ಪಿದ್ದಾರೆ" ಎಂದು ತಿಳಿಸಿದರು.

"ಬಿಜೆಪಿ ಹಾಗೂ ಜೆಡಿಎಸ್ ಸುಳ್ಳು ಆರೋಪ ಮಾಡುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ನಾವು ಕಾವೇರಿ ನೀರು ಪೋಲಾಗುವುದನ್ನು ತಪ್ಪಿಸಿ ಜನರಿಗೆ ಕುಡಿಯುವ ನೀರು ನೀಡಲು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದಾಗ, ಚಿತ್ರರಂಗದಿಂದ ಆಗಲಿ, ಸಾಹಿತ್ಯ ರಂಗ (ಕೆಲವರನ್ನು ಹೊರತುಪಡಿಸಿ) ಯಾರಿಂದಲೂ ಬೆಂಬಲ ಸಿಗಲಿಲ್ಲ. ಪಾದಯಾತ್ರೆ ಅಡ್ಡಿಪಡಿಸಲು ನಮ್ಮ ಮೇಲೆ ಪ್ರಕರಣ ದಾಖಲಿಸಿದರು. ಕೋವಿಡ್ ಸೋಂಕಿತನನ್ನು ನನ್ನ ಬಳಿ ಕಳುಹಿಸಿದ್ದರು. ಆದರೂ ನಾವು ಹೋರಾಟ ಮಾಡಿದ್ದೇವೆ" ಎಂದು ತಿಳಿಸಿದರು.

"ನಾವು ಬೆಂಗಳೂರು ನಗರ ಹೊರತಾಗಿ ಪಾದಯಾತ್ರೆ ಮಾಡಲು ಅವಕಾಶ ನೀಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಹೋರಾಟಕ್ಕೆ ಅಡ್ಡಿ ಮಾಡಲ್ಲ. ಪಾದಯಾತ್ರೆಗೆ ಜಿ.ಟಿ.ದೇವೇಗೌಡರು, ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದರು. ಈಗ ಅವರೇ ಪಾದಯಾತ್ರೆ ಮಾಡುತ್ತಿದ್ದಾರೆ" ಎಂದು ತಿಳಿಸಿದರು.

"ಈ ಜನಾಂದೋಲನ ಸಭೆಗೆ ಸಿಎಂ ಭಾಗವಹಿಸುವ ಅಗತ್ಯವಿಲ್ಲ ಎಂದು ನಾವೇ ಹೇಳಿದ್ದೆವು. ನಾಳೆ ಸಮಾವೇಶಕ್ಕೂ ಅವರು ಬರುವ ಅಗತ್ಯ ಇರಲಿಲ್ಲ. ಆದರೆ ಅವರ ತವರು ಜಿಲ್ಲೆ ಹೀಗಾಗಿ ಅವರು ಭಾಗವಹಿಸುತ್ತಿದ್ದಾರೆ" ಎಂದರು.

ನಾಳೆ ಸಮಾವೇಶದಲ್ಲಿ ಬೇರೆ ಹಗರಣಗಳ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೀರಾ ಎಂದು ಕೇಳಿದಾಗ, "ಒಂದೇ ಸಲ ಎಲ್ಲವನ್ನೂ ಬಿಡುಗಡೆ ಮಾಡುವುದಿಲ್ಲ. ಇನ್ನು ಸಾಕಷ್ಟು ಪ್ರಕರಣಗಳಿವೆ" ಎಂದು ತಿಳಿಸಿದರು.

 

Advertisement
Next Article